×
Ad

ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ: ಕೇಸರಿ ಬೆಂಬಲಕ್ಕೆ ನಿಂತ ಎಸ್ಸಿ-ಎಸ್ಟಿ ಸಮುದಾಯ

Update: 2019-05-25 20:56 IST

ಬೆಂಗಳೂರು, ಮೇ 25: ಬಹಳ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ(ಎಸ್ಸಿ-ಎಸ್ಟಿ) ಮತದಾರರು ಇದೇ ಮೊದಲ ಬಾರಿಗೆ ಬಿಜೆಪಿ ಬೆಂಬಲಿಸಿರುವುದು ಈ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ.

2014ರ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಏಳು ಮೀಸಲು ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಕೇವಲ 2 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿತ್ತು. ಆದರೆ, ಪ್ರಸ್ತುತ ಚುನಾವಣೆಯಲ್ಲಿ ರಾಜ್ಯದ ಏಳು ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಪ್ರಾಬಲ್ಯ ಮೆರೆದಿದೆ.

ಕಲಬುರಗಿ-ಡಾ.ಉಮೇಶ್ ಜಾಧವ್, ಕೋಲಾರ-ಎಸ್.ಮುನಿಸ್ವಾಮಿ, ವಿಜಯಪುರ-ರಮೇಶ್ ಜಿಗಜಿಣಗಿ, ಚಿತ್ರದುರ್ಗ-ಎ.ನಾರಾಯಣಸ್ವಾಮಿ, ಚಾಮರಾಜನಗರ-ವಿ.ಶ್ರೀನಿವಾಸಪ್ರಸಾದ್(ಎಸ್ಸಿ) ಹಾಗೂ ಬಳ್ಳಾರಿ-ವೈ.ದೇವೇಂದ್ರಪ್ಪ ಹಾಗೂ ರಾಯಚೂರು-ರಾಜಾಅಮರೇಶ್ ನಾಯಕ್(ಎಸ್ಟಿ) ಮೀಸಲು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

2014ರಲ್ಲಿ ಕ್ರಮವಾಗಿ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಚಂದ್ರಪ್ಪ, ಧ್ರುವನಾರಾಯಣ, ಬಿ.ವಿ.ನಾಯಕ್ ಹಾಗೂ ಬಿಜೆಪಿಯ ರಮೇಶ್ ಜಿಗಜಿಣಗಿ ಹಾಗೂ ಬಿ.ಶ್ರೀರಾಮುಲು (ರಾಜೀನಾಮೆ) ಆಯ್ಕೆಯಾಗಿದ್ದರು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ಸಿನ ವಿ.ಎಸ್.ಉಗ್ರಪ್ಪ ಜಯಗಳಿಸಿದ್ದರು.

ವಿಜಯಪುರ-ರಮೇಶ್ ಜಿಗಜಿಣಗಿ ಅತ್ಯಂತ ಹೆಚ್ಚು 2.58 ಲಕ್ಷ, ಕೋಲಾರ- ಎಸ್.ಮುನಿಸ್ವಾಮಿ-2.10ಲಕ್ಷ, ರಾಜಾಅಮರೇಶ್ ನಾಯಕ್-1.17ಲಕ್ಷ, ಉಮೇಶ್ ಜಾಧವ್-95,452, ಎ.ನಾರಾಯಣಸ್ವಾಮಿ-80,178 ಹಾಗೂ ದೇವೇಂದ್ರಪ್ಪ- 55,707 ಮತಗಳ ಬಾರಿ ಅಂತರದಿಂದ ಗೆಲುವು ದಾಖಲಿಸಿದ್ದರೆ, ಚಾಮರಾಜನಗರ- ವಿ.ಶ್ರೀನಿವಾಸ ಪ್ರಸಾದ್ ಕೇವಲ 1,817 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News