ಡಿಸಿಎಂ ತವರು ತುಮಕೂರಿನಲ್ಲಿ 'ಪರಮೇಶ್ವರ್ ಹಠಾವೋ, ಕಾಂಗ್ರೆಸ್ ಬಚಾವೋ' ಪೋಸ್ಟರ್

Update: 2019-05-25 17:03 GMT

ತುಮಕೂರು, ಮೇ 25: ಮೈತ್ರಿ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಸೋತ ಬೆನ್ನಲ್ಲೆ,  ಉಪ ಮುಖ್ಯಮಂತ್ರಿ ಪರಮೇಶ್ವರ್ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದ್ದು, 'ಪರಮೇಶ್ವರ್ ಹಠಾವೋ, ಕಾಂಗ್ರೆಸ್ ಬಚಾವೋ' ಎಂಬ ಪೋಸ್ಟರ್ ಗಳು ನಗರದಲ್ಲಿ ಕಾಣಿಸಿಕೊಂಡಿದೆ. ಶುಕ್ರವಾರ ರಾತ್ರೋರಾತ್ರಿ ನೂರಾರು ಪೋಸ್ಟರ್ ಗಳು ನಗರದ ಪ್ರಮುಖ ಬೀದಿಗಳಲ್ಲಿ ಅಂಟಿಸಲಾಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಚುನಾವಣಾ ಜವಾಬ್ದಾರಿಯನ್ನು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಹೊತ್ತಿದ್ದರು. ಇದೇ ಮಾತನ್ನು ಜೆಡಿಎಸ್ ವರಿಷ್ಠರು ಒಂದೆರೆಡು ಸಾರ್ವಜನಿಕ ಸಭೆಗಳಲ್ಲಿಯೂ ಹೇಳಿದ್ದರು. ಹೀಗಾಗಿ ಜೆಡಿಎಸ್ ಸೋತಿರುವುದಕ್ಕೆ ಪರಮೇಶ್ವರ್ ಅವರೇ ಕಾರಣವಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೇ ಈಗ ಪರಮೇಶ್ವರ್ ವಿರುದ್ಧದ ಪೋಸ್ಟರ್ ಗಳು ಕಾಣಿಸಿಕೊಂಡಿವೆ.

ಲೋಕಸಭಾ ಚುನಾವಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಪರಮೇಶ್ವರ್, ಮೈತ್ರಿ ಸರಕಾರದ ಸಚಿವ ಎಸ್.ಆರ್.ಶ್ರೀನಿವಾಸ್ ಜೊತೆಗೆ ಕ್ಷೇತ್ರ ವ್ಯಾಪ್ತಿ ಪ್ರಚಾರ ಕೈಗೊಂಡಿದ್ದರು. ಅಲ್ಲದೇ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲಿಯೂ ಮೈತ್ರಿ ಅಭ್ಯರ್ಥಿಗಳ ಪ್ರಚಾರ ಕೈಗೊಂಡಿದ್ದರು.

'ಕಾಲಿಗೆ ಚಕ್ರ ಕಟ್ಟಿಕೊಂಡ ರೀತಿ ಓಡಾಡಿದ್ದ ಪರಮೇಶ್ವರ್ ಹಾಗೂ ಶ್ರೀನಿವಾಸ್ ಅವರು ದೇವೇಗೌಡ ಪರ ಪ್ರಚಾರ ಕೈಗೊಂಡು, ಗೆಲುವಿಗೆ ಶ್ರಮಿಸಿದ್ದರು. ಆದರೆ ಜಿಲ್ಲಾ ಕಾಂಗ್ರೆಸ್‍ನಲ್ಲಿ ಪರಮೇಶ್ವರ್ ವಿರೋಧಿ ಬಣ ಹಾಗೂ ದೇವೇಗೌಡ ವಿರೋಧಿಗಳು ವ್ಯವಸ್ಥಿತವಾಗಿ ಮೈತ್ರಿ ವಿರುದ್ಧವಾಗಿ ಕೆಲಸ ಮಾಡಿದ್ದರಿಂದ ಕ್ಷೇತ್ರದಲ್ಲಿ ಸೋಲಬೇಕಾಯಿತು. ಅದಕ್ಕೆ ಪರಮೇಶ್ವರ್ ಅವರನ್ನು ಹೊಣೆಗಾರರನ್ನಾಗಿಸಿ, ತಲೆದಂಡ ಪಡೆಯಬಹುದೆಂಬ ಕಾರಣಕ್ಕೆ ದೇವೇಗೌಡರನ್ನು ಸೋಲಿಸಿ, ಈಗ ಪರಮೇಶ್ವರ್ ವಿರುದ್ಧ ಪೋಸ್ಟರ್ ರಾಜಕಾರಣವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ, ಡಾ.ಜಿ.ಪರಮೇಶ್ವರ್ ಅವರ ಏಳ್ಗೆಯನ್ನು ಸಹಿಸದೇ ಕೆಲ ಕುತಂತ್ರಿಗಳು ಇಂತಹ ಕೆಲಸ ಮಾಡಿದ್ದು, ಈಗಾಗಲೇ ಪೋಸ್ಟರ್ ಅಂಟಿಸಿದವವರನ್ನು ಕಂಡು ಹಿಡಿದು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಈ ಪೋಸ್ಟರ್ ರಾಜಕಾರಣದ ಹಿಂದೆ ಇರುವ ಕಾಣದ ಕೈ ಯಾವುದು ಎಂಬ ಸತ್ಯ ಸದ್ಯದಲ್ಲಿಯೇ ಹೊರಬಿಳಲಿದೆ ಎಂದು ತಿಳಿಸಿದ್ದಾರೆ.

ದಲಿತ ಸಮುದಾಯದ ನಾಯಕರಾಗಿರುವ ಡಾ.ಜಿ.ಪರಮೇಶ್ವರ್ ಅವರನ್ನು ಅವಹೇಳನ ಮಾಡುವ ರೀತಿಯಲ್ಲಿ ಪೋಸ್ಟರ್ ಗಳನ್ನು ಮುದ್ರಿಸಿ, ಅಂಟಿಸಿರುವವರ ಹಿಂದಿನ ಕೈ ಯಾವುದೇ ಆದರೂ ಮುಂದಿನ ದಿನಗಳಲ್ಲಿ ಸಮುದಾಯ ತಕ್ಕ ಉತ್ತರ ನೀಡಲಿದೆ. ರಾಜಕೀಯವಾಗಿ ಪರಮೇಶ್ವರ್ ಅವರಿಗೆ ಕೆಟ್ಟ ಹೆಸರು ತರಲು ಯತ್ನಿಸಿರುವವರ ಷಡ್ಯಂತ್ರ ಫಲಿಸುವುದಿಲ್ಲ. ಅವರಿಗೆ ತಕ್ಕ ಉತ್ತರವನ್ನು ಸಮುದಾಯ ನೀಡಲಿದೆ ಎನ್ನುವುದನ್ನು ಮರೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೌನ್‍ಹಾಲ್‍ ವೃತ್ತ, ಡಿಸಿ ಕಚೇರಿ ಸುತ್ತಮುತ್ತ ಪೋಸ್ಟರ್ ಗಳನ್ನು ಅಂಟಿಸಿದ್ದು, ಅಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರೆ ಸತ್ಯಾಂಶ ಗೊತ್ತಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸುವಂತೆ ಮನವಿ ಮಾಡಲಾಗಿದ್ದು, ಪೋಸ್ಟರ್ ಅಂಟಿಸಿದವರನ್ನು ಪೊಲೀಸರು ಶೀಘ್ರ ಬಂಧಿಸಲಿದ್ದಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News