×
Ad

ಸಿದ್ದಾಪುರ: ರಸ್ತೆಯಲ್ಲಿ ಹಾಡಹಗಲೇ ಕಾಡಾನೆಗಳ ಪಥಸಂಚಲನ

Update: 2019-05-25 23:10 IST

ಮಡಿಕೇರಿ ಮೇ 25 : ದಿನದಿಂದ ದಿನಕ್ಕೆ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕಾರ್ಮಿಕರು ಬೆಳೆಗಾರರು ಜೀವ ಭಯದಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದಾಪುರ ಸಮೀಪದ ಕರಡಿಗೋಡು ಗುಹ್ಯ ಗ್ರಾಮ ವ್ಯಾಪ್ತಿಯಲ್ಲಿ ಹಾಡಹಗಲೇ ರಾಜಾರೋಷವಾಗಿ ರಸ್ತೆಯಲ್ಲಿ ಕಾಡಾನೆ ಹಿಂಡು ಓಡಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಗಳನ್ನು ಕಾಡಿಗಟ್ಟಲು ಹರಸಾಹಸ ಪಟ್ಟರು.

ಹಲವು ತಿಂಗಳಿನಿಂದ ನಿರಂತರವಾಗಿ ಸಿದ್ದಾಪುರ, ಕರಡಿಗೋಡು ,ಗುಹ್ಯ, ಕಣ್ಣಂಗಾಲ, ಅಮ್ಮತ್ತಿ, ಬಾಡಗ ಬಾಣಂಗಾಲ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆ ಹಾವಳಿಯಿಂದ ಜನರು ನೆಮ್ಮದಿಯಾಗಿ ಮನೆಯಿಂದ ಹೊರಬರಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಕಾಡಾನೆ ಹಾವಳಿ ಶಾಶ್ವತವಾಗಿ ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕರಡಿಗೋಡು ಗ್ರಾಮ ವ್ಯಾಪ್ತಿಯಲ್ಲಿ ಕಾಣಿಸಿಕೊಂಡ ಒಂಭತ್ತು ಕಾಡಾನೆಗಳನ್ನು ಕಾಡಿಗಟ್ಟಲು ಉಪವಲಯರಣ್ಯಾಧಿಕಾರಿ ದೇವಯ್ಯ ಅವರ ನೇತೃತ್ವದ ತಂಡ ದಿನವಿಡೀ ಕಾರ್ಯಾಚರಣೆ ನಡೆಸಿತು.

ಕಾಡಾನೆ ಹಾವಳಿಯಿಂದ ಬಾಳೆ, ಅಡಿಕೆ, ಕಾಫಿ, ತೆಂಗು ಸೇರಿದಂತೆ ಕೃಷಿ ಫಸಲುಗಳು ನಿರಂತರವಾಗಿ ನಾಶವಾಗುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಕಾಫಿ ತೋಟಕ್ಕೆ ತೆರಳಿ ಕೆಲಸ ನಿರ್ವಹಿಸಿ ಜೀವನವನ್ನು ನಡೆಸುವ ಕಾರ್ಮಿಕರು ಕಾಡಾನೆಗಳ ಹಾವಳಿಯಿಂದ ಭಯಭೀತರಾಗಿ ಕೆಲಸಕ್ಕೂ ತೆರಳದ ಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಕಾಣಿಸಿಕೊಳ್ಳುತ್ತಿರುವ ಕಾಡಾನೆಯನ್ನು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿಸುವ ಕಾರ್ಯಾಚರಣೆ ಮಾತ್ರ ನಡೆಯುತ್ತಿದ್ದು, ಶಾಶ್ವತ ಪರಿಹಾರವನ್ನು ಸರ್ಕಾರ ಸೂಚಿಸುತ್ತಿಲ್ಲವೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News