ಸಿಇಟಿ ಫಲಿತಾಂಶ: ಕೃಷಿ ವಿಭಾಗದಲ್ಲಿ ಶ್ರೇಯಸ್ ಬಿ.ಬರಗೂರ್ ರಾಜ್ಯಕ್ಕೆ ಪ್ರಥಮ

Update: 2019-05-26 12:06 GMT

ಚಿಕ್ಕಮಗಳೂರು, ಮೇ 26: ಸಿಇಟಿ ಪ್ರಾಯೋಗಿಕ ಪರೀಕ್ಷೆಯ ಕೃಷಿ ವಿಭಾಗದಲ್ಲಿ ಸಿರಿಗಾಪುರ ಸಾಯಿ ಏಂಜಲ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶ್ರೇಯಸ್ ಬಿ. ಬರಗೂರ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಮುಖ್ಯ ಪ್ರಾಚಾರ್ಯೆ ವಿಜಯಾ ನಾಗೇಶ್ ತಿಳಿಸಿದ್ದಾರೆ.

ದ್ವಿತೀಯ ಪಿಯುಸಿ ಪಿಸಿಎಂಬಿ ಪರೀಕ್ಷೆಯಲ್ಲಿ ಶೇ.94 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿ ಶ್ರೇಯಸ್ ಸಿಇಟಿ ಫಲಿತಾಂಶದ ಪ್ರಾಯೋಗಿಕ ಪರೀಕ್ಷೆಯ ಕೃಷಿ ವಿಭಾಗದಲ್ಲಿ (ಬಿಎಸ್ಸಿ ಅಗ್ರಿಕಲ್ಚರ್ ಪ್ರಾಕ್ಟಿಕಲ್) ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವುದು ಹಾಗೂ ವೆಟರ್ನರಿ ಪ್ರಾಕ್ಟಿಕಲ್‍ನಲ್ಲಿ ರಾಜ್ಯಕ್ಕೆ 16ನೇ ರ್ಯಾಂಕ್‍ಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿ ಶ್ರೇಯಸ್ ಬಿ ಬರಗೂರ್ ತಂದೆ ಬಿ.ಎಲ್.ಭೀಮರಾಜು ಹಾಗೂ ತಾಯಿ ಎಂ.ಧನಲಕ್ಷ್ಮೀ ಅವರ ಪುತ್ರರಾಗಿದ್ದಾರೆ. 

ಶ್ರೇಯಸ್ ಬಿ ಬರಗೂರ್ ಮಾತನಾಡಿ, ದ್ವಿತೀಯ ಪಿಯು ಪರೀಕ್ಷೆ ಸಂದರ್ಭದಲ್ಲಿ ಸಂಜೆ 6:30 ರಿಂದ 10:30ರ ತನಕ ಮಾತ್ರ ಓದುತ್ತಿದ್ದೆ. ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಬರುತ್ತದೆ ಎಂಬ ವಿಶ್ವಾಸವಿತ್ತು. ಗಣಿತ ಮತ್ತು ಇಂಗ್ಲೀಷ್‍ನಲ್ಲಿ ನನ್ನ ನಿರೀಕ್ಷೆಗಿಂತ ಸ್ವಲ್ಪ ಕಡಿಮೆ ಅಂಕ ಬಂತು. ಆದರೆ ಅದನ್ನೇ ಸವಾಲಾಗಿಟ್ಟುಕೊಂಡು ಆವಶ್ಯಕತೆಗನುಗುಣವಾಗಿ ಕಾಲೇಜಿನಲ್ಲಿ ಉಪನ್ಯಾಸಕರಿಂದ ಹೆಚ್ಚು ಮಾಹಿತಿ ಪಡೆದೆ ಹಾಗೂ ಗ್ರಾಮೀಣ ಪ್ರದೇಶಕ್ಕೆ ಬೇಟಿಕೊಟ್ಟು ಉಪಯುಕ್ತ ಮಾಹಿತಿ ಪಡೆದುಕೊಂಡು ತಯಾರಾಗಿದ್ದೆ, ಇದು ಹೆಚ್ಚು ಅನುಕೂಲವಾಯಿತು. ನಂತರ ಸಿಇಟಿ ಪರೀಕ್ಷೆ ಬರೆದು ಅದರಲ್ಲಿ ಯಶಸ್ವಿಯಾದೆ. ಇದಕ್ಕೆ ಕಾಲೇಜಿನ ಉಪನ್ಯಾಸಕರ ಪ್ರೋತ್ಸಾಹ ಮತ್ತು ಪೋಷಕರ ಉತ್ತೇಜನ ಕಾರಣ ಎಂದರು.

ವಿಜಯಾನಾಗೇಶ್ ಮಾತನಾಡಿ, ಈ ಸಾಲಿನ ಸಿಇಟಿ ಪ್ರಾಯೋಗಿಕ ಪರೀಕ್ಷೆಯ ಕೃಷಿ ವಿಭಾಗದಲ್ಲಿ ವಿದ್ಯಾರ್ಥಿ ಶ್ರೇಯಸ್ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿರುವುದು ಸಂಸ್ಥೆ ಜೊತೆ ಜಿಲ್ಲೆಗೆ ಹೆಮ್ಮೆಯ ವಿಷಯ. ವಿದ್ಯಾರ್ಥಿಯ ಪರಿಶ್ರಮ ಮತ್ತು ಉಪನ್ಯಾಸಕರ ಸಲಹೆ ಸಹಕಾರದಿಂದ ಉತ್ತಮ ಅಂಕ ಪಡೆದಿದ್ದಾನೆ. ಅವರ ಪೋಷಕರು ಭರವಸೆಯಿಟ್ಟು ಸಾಯಿ ಏಂಜಲ್ಸ್ ಸಂಸ್ಥೆಯಲ್ಲೆ ತರಬೇತಿಗೆ ಸ್ಪಂದಿಸಿದ್ದರು. ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಉತ್ತಮ ತರಬೇತಿಯನ್ನು ಸಂಸ್ಥೆಯಲ್ಲೆ ಪಡೆದು ಈ ಫಲಿತಾಂಶಕ್ಕೆ ಕಾರಣವಾಗಿರುವುದು ಮತ್ತೊಂದು ಸಂತೋಷ. ಮುಂದೆ ಅವನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಪ್ರಾಚಾರ್ಯ ಕೆ.ಕೆ.ನಾಗರಾಜ್,ಸಂಸ್ಥೆ ಜಂಟಿ ಕಾರ್ಯದರ್ಶಿ ಎಂ.ಜೆ.ಕಾರ್ತಿಕ್ ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News