ಕಾಂಗ್ರೆಸ್ ನಲ್ಲಿ ಲಿಂಗಾಯತರ ಕಡೆಗಣನೆ: ಶಾಸಕ ಬಿ.ಸಿ.ಪಾಟೀಲ್

Update: 2019-05-26 12:41 GMT

ಬೆಂಗಳೂರು, ಮೇ 26: ಕಾಂಗ್ರೆಸ್‌ನಲ್ಲಿ 1968-69ರಿಂದಲೂ ಲಿಂಗಾಯತ ಸಮುದಾಯವನ್ನು ಕಡೆಗಣಿಸುತ್ತಾ ಬರಲಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಬೇಕೆಂದು ಶಾಸಕ ಬಿ.ಸಿ.ಪಾಟೀಲ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯಿತರನ್ನು ಕಡೆಗಣಿಸುತ್ತಿರುವ ಕಾರಣಕ್ಕಾಗಿ ಉತ್ತರ ಕರ್ನಾಟಕ ಮತ್ತು ಹೈ-ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಾದರು ಇಂತಹ ವಾತಾವರಣ ಬದಲಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಈ ಹಿಂದೆ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ ಅವರಿಗೆ ಅಧಿಕಾರ ತಪ್ಪಿಸಲಾಗಿತ್ತು. ಇದು ಈಗಲೂ ಯಥಾಪ್ರಕಾರವಾಗಿ ಮುಂದುವರೆದಿದೆ. ಜಿಲ್ಲೆಯಲ್ಲಿ ಏಕೈಕ ಶಾಸಕನಾಗಿ ನಾನು ಆಯ್ಕೆಯಾಗಿದ್ದೆ. ಆದರೂ ಪಕ್ಷದಲ್ಲಿ ನನಗೆ ಸಚಿವ ಸ್ಥಾನ ನೀಡಲಿಲ್ಲ. ಈ ಬಗ್ಗೆ ನನಗೆ ಅಸಮಾಧಾನ ಇದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ನಲ್ಲಿ ವೇದಿಕೆಯ ನಾಯಕರೇ ಹೆಚ್ಚಾಗಿದ್ದಾರೆಯೆ ಹೊರತು ಪಕ್ಷಕ್ಕಾಗಿ ದುಡಿಯುವಂತಹ ಕಾರ್ಯಕರ್ತರನ್ನು ಗುರುತಿಸುವಲ್ಲಿ, ಹುಟ್ಟು ಹಾಕುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಉಳಿಯಬೇಕಾದರೆ ನಾಯಕರು ತಮ್ಮ ಚಿಂತನೆಯಲ್ಲಿ ಅಮೂಲಾಗ್ರವಾಗಿ ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News