×
Ad

ಕೆಲವು ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದು ಸತ್ಯ: ಸಚಿವ ಸತೀಶ್ ಜಾರಕಿಹೊಳಿ

Update: 2019-05-26 20:16 IST

ಬೆಳಗಾವಿ, ಮೇ 26: ರಾಜ್ಯದ ಮೈತ್ರಿ ಸರಕಾರವು ಇನ್ನು ನಾಲ್ಕು ವರ್ಷ ಸ್ಥಿರವಾಗಿರುತ್ತದೆ. ಈಗಾಗಲೇ ಮೂರ್ನಾಲ್ಕು ಮಂದಿ ಶಾಸಕರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಬಿಜೆಪಿ ಸಂಪರ್ಕದಲ್ಲಿರುವುದು ಸತ್ಯ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷವು ಸುಭದ್ರವಾಗಿದೆ. ಈಗ ಚೆಂಡು ಬಿಜೆಪಿ ಪಕ್ಷ ಹಾಗೂ ಅತೃಪ್ತರ ಅಂಗಳದಲ್ಲಿದೆ. ಈಗೇನಿದ್ದರೂ ಅವರು ಏನು ಮಾಡುತ್ತಾರೆ ಅನ್ನೋದು ನೋಡಬೇಕು. ಸರಕಾರ ಅಸ್ತಿರಗೊಳಿಸಲು ಹೆಚ್ಚಿನ ಶಾಸಕರ ಬೆಂಬಲ ಅಗತ್ಯ ಎಂದರು.

ಲೋಕಸಭಾ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡುವ ಅಗತ್ಯವಿಲ್ಲ. ಇನ್ನೇನಿದ್ದರೂ, ಅತೃಪ್ತ ಶಾಸಕರು ಯಾರು, ಅವರು ಎಲ್ಲಿದ್ದಾರೆ, ಎಲ್ಲಿ ಸಭೆಗಳನ್ನು ಮಾಡುತ್ತಿದ್ದಾರೆ, ಯಾರು ಯಾರು ರೆಸಾರ್ಟ್‌ಗೆ ಹೋಗುತ್ತಾರೆ ಅನ್ನೋದನ್ನು ಹುಡುಕಬೇಕಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ರೋಷನ್ ಬೇಗ್, ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿ ಟ್ವೀಟ್ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೋಷನ್ ಬೇಗ್ ಪ್ರಧಾನಿಗೆ ಶುಭಾಶಯ ಕೋರಿದ್ದು ತಪ್ಪಲ್ಲ ಎಂದರು.

ರಾಜ್ಯ ಸರಕಾರವನ್ನು ಉಳಿಸಲು ಹಾಲಿ ಸಚಿವರಿಂದ ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸ್ಥಾನ ನೀಡುವ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಪಕ್ಷಕ್ಕೆ ಬಿಟ್ಟ ವಿಚಾರ. ಸರಕಾರವನ್ನು ಉಳಿಸಲು ಪಕ್ಷ ಯಾವ ಬಗೆಯ ತೀರ್ಮಾನ ಬೇಕಾದರೂ ತೆಗೆದುಕೊಳ್ಳಬಹುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News