ಧ್ರುವನಾರಾಯಣರಿಗೆ ವಿಧಾನ ಪರಿಷತ್ ಸ್ಥಾನ ಬಿಟ್ಟುಕೊಡಲು ಸಿದ್ದ: ಆರ್.ಧರ್ಮಸೇನ
ಮೈಸೂರು,ಮೇ 26: ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಸೋಲು ಆಘಾತ ಉಂಟು ಮಾಡಿದ್ದು, ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಪಕ್ಷದ ವರಿಷ್ಟರು ಒಪ್ಪುವುದಾದರೆ ವಿಧಾನಪರಿಷತ್ ಸ್ಥಾನವನ್ನು ಆರ್.ಧ್ರುವನಾರಾಯಣ ಅವರಿಗೆ ಬಿಟ್ಟುಕೊಡಲು ಸಿದ್ದ ಎಂದು ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದ 5 ನೇ ಮತ್ತು ರಾಜ್ಯದ ನಂ.1 ಸಂಸದ ಎಂದು ಹೆಸರು ಪಡೆದಿದ್ದ ಧ್ರುವನಾರಾಯಣ ಅವರಿಗೆ ಸೋಲಾಗಿದೆ. ಅವರಿಗೆ ಬೆಂಬಲ ವ್ಯಕ್ತಿಪಡಿಸಿ ಪಕ್ಷದ ಸಂಘಟನೆ ಮತ್ತು ಹಿತದೃಷ್ಟಿಯಿಂದ ವಿಧಾನಪರಿಷತ್ ಸ್ಥಾನವನ್ನು ಬಿಟ್ಟುಕೊಡಲು ಸಿದ್ದ, ಈ ಸಂಬಂಧ ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತಾನಾಡುವುದಾಗಿ ತಿಳಿಸಿದರು.
ರಾಜ್ಯದ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ನಂ.1 ಸ್ಥಾನ ಪಡೆದಿದ್ದರು. ಹಾಗೆ ಧ್ರುವನಾರಾಯಣ ಅವರು ದೇಶದ 5 ನೇ ರಾಜ್ಯದ ನಂ.1 ಸಂಸದ ಎಂಬ ಕೀರ್ತಿಗೆ ಪಾತ್ರರಾಗಿದ್ದವರು. ಅಂತಹವರ ಸೋಲು ನೋವುಂಟು ಮಾಡಿದೆ ಎಂದರು.
ಜನರ ತೀರ್ಮಾನವನ್ನು ಒಪ್ಪಲೇಬೇಕು, ನನಗೆ ಕಾಂಗ್ರೆಸ್ ಪಕ್ಷವೇ ಮುಖ್ಯ. ಸಂಘಟನೆಯ ದೃಷ್ಟಿಯಿಂದ ಆರ್.ಧ್ರುವನಾರಾಯಣ ಅವರಿಗೆ ವಿಧಾನ ಪರಿಷತ್ ಸ್ಥಾನವನ್ನು ಬಿಟ್ಟು ಕೊಡುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಂಜುನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.