ಓ ಮೆಣಸೇ…

Update: 2019-05-26 18:21 GMT

ಸಾರ್ವಜನಿಕ ಜೀವನದಲ್ಲಿ ಸಮಸ್ಯೆಗಳು, ಸವಾಲುಗಳಿಗೆ ಸಿಲುಕಿ ನರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. - ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಖಾಸಗಿ ಜೀವನವನ್ನು ಚೆನ್ನಾಗಿಟ್ಟುಕೊಂಡರೆ ಈ ಎಲ್ಲ ಸಮಸ್ಯೆಗಳು ಎದುರಾಗುತ್ತಿರಲಿಲ್ಲ.

---------------------

ಶಿವಸೇನೆಯ ಹಿಂದುತ್ವವು ಬಿಜೆಪಿಯ ಹಿಂದುತ್ವಕ್ಕಿಂತ ಭಿನ್ನವಾದುದು - ಆದಿತ್ಯಠಾಕ್ರೆ, ಶಿವಸೇನೆ ಯುವ ವಿಭಾಗದ ಮುಖ್ಯಸ್ಥ
ಹಿಂಸೆಗೆ ಬಳಸುವ ಆಯುಧಗಳಲ್ಲಿ ವ್ಯತ್ಯಾಸವಿರಬೇಕು.

---------------------

ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಯಿಂದ ಕಾಂಗ್ರೆಸ್‌ಗೆ ಯಾವುದೇ ರೀತಿಯ ಲಾಭವಾಗಿಲ್ಲ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಪರಸ್ಪರ ಬೆನ್ನಿಗೆ ಚೂರು ಹಾಕಿಕೊಂಡ ಪರಿಣಾಮ.

---------------------

ಇತ್ತೀಚೆಗೆ ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ನೋಡಿದರೆ ಗಾಬರಿಯಾಗುತ್ತದೆ. - ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ
ಬರೇ ಕಸ್ತೂರಿ ಚಾನೆಲ್ ನೋಡಿ.

---------------------

ನನಗಾಗಿ ದೇವರಲ್ಲಿ ಪ್ರಾರ್ಥಿಸುವ ಪ್ರವೃತ್ತಿ ನನ್ನದಲ್ಲ. - ನರೇಂದ್ರ ಮೋದಿ, ಪ್ರಧಾನಿ
ಸದ್ಯಕ್ಕೆ ಜನರು ದೇಶಕ್ಕಾಗಿ ಪ್ರಾರ್ಥಿಸುವ ಸ್ಥಿತಿ ನಿರ್ಮಾಣವಾಗಿದೆ.

---------------------

ಪತ್ರಕರ್ತರಲ್ಲೂ ಭ್ರಷ್ಟರಿದ್ದು, ವಾರಕ್ಕೊಬ್ಬರು ಜೈಲಿಗೆ ಹೋಗುತ್ತಿದ್ದಾರೆ. - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಅವರನ್ನೆಲ್ಲ ತಮ್ಮ ಪಕ್ಷಕ್ಕೆ ಯಾಕೆ ಸೇರಿಸಿಕೊಳ್ಳಬಾರದು?
---------------------

ಹತ್ತು ಸಿನೆಮಾ ಆಫರ್‌ಗಳಿದ್ದರೂ ನಾನು ಮೊದಲು ಆಯ್ಕೆ ಮಾಡಿಕೊಳ್ಳುವುದು ಆ್ಯಕ್ಷನ್ ಸಿನೆಮಾಗಳನ್ನು. - ಅಕ್ಷಯ್‌ಕುಮಾರ್, ನಟ
ಮೋದಿ ಜೊತೆ ಇನ್ನೆಷ್ಟು ಸಿನೆಮಾಗಳಲ್ಲಿ ಅಭಿನಯಿಸಲಿದ್ದೀರಿ?

---------------------

ಸತ್ಯವನ್ನು ಯಾರಿಂದಲೂ ಮುಚ್ಚಿಡಲಾಗದು. - ಸದಾನಂದ ಗೌಡ, ಕೇಂದ್ರ ಸಚಿವ
ಹೌದು, ನೀವು ಮುಚ್ಚಿಟ್ಟ ಸತ್ಯ ಒಂದಲ್ಲ ಒಂದು ದಿನ ಹೊರಬರಲಿದೆ.

---------------------

ರೋಷನ್ ಬೇಗ್ ಕೋಳಿನೇ ಹುಟ್ಟದೆ ಕಬಾಬ್ ಮಾಡಲು ಹೊರಟಿದ್ದಾರೆ. - ದಿನೇಶ್‌ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ರೋಷನ್ ಬೇಗ್ ಸ್ವತಃ ಬಿಜೆಪಿಯ ಕಬಾಬ್ ಆಗಲು ಹೊರಟಿದ್ದಾರೆ.

---------------------

ಸಿದ್ದರಾಮಯ್ಯ ದುರಂಹಕಾರಿ, ದಿನೇಶ್ ಗುಂಡೂರಾವ್ ಪ್ಲಾಪ್ ಅಧ್ಯಕ್ಷ, ವೇಣುಗೋಪಾಲ್ ಬಫೂನ್. - ರೋಷನ್‌ಬೇಗ್, ಶಾಸಕ
  ಕಾಂಗ್ರೆಸ್ ಅಂಗಡಿಯ ರೇಷನ್ ಮುಗಿಯಿತೇ?
---------------------

ನಮ್ಮ ನಾಯಕರೇ ನಮ್ಮ ಪಕ್ಷಕ್ಕೆ ಮುಳುವು. - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
ಆ ನಾಯಕರಲ್ಲಿ ತಾವೂ ಸೇರಿಲ್ಲವೇ?
---------------------

ಬಿಜೆಪಿ ಸಮುದ್ರವಿದ್ದಂತೆ, ಅಲ್ಲಿಗೆ ಯಾರೂ ಬರಬಹುದು - ಶೋಭಾ ಕರಂದ್ಲಾಜೆ, ಸಂಸದೆ
ಶಾರ್ಕ್‌ಗಳಿವೆ ಎಚ್ಚರಿಕೆ.

---------------------

ಪ್ರಧಾನಿ ಮೋದಿಯನ್ನು ಕಳ್ಳ ಕಳ್ಳ ಎಂದಿರಿ, ಈಗ (ಫಲಿತಾಂಶ) ಗೊತ್ತಾಯಿತೇ ಮೋದಿ ಕಳ್ಳ ಅಲ್ಲ ಎಂದು - ಜಗ್ಗೇಶ್, ನಟ
ಇದು ಕಳ್ಳರಿಗಷ್ಟೇ ಕಾಲ ಎನ್ನುವುದನ್ನು ಫಲಿತಾಂಶ ಹೇಳಿದೆ.

---------------------

ನನ್ನ ನಗುವನ್ನು ಅಪಹಾಸ್ಯಗೈದ ವಿರೋಧ ಪಕ್ಷದ ನಾಯಕರಿಗೆ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ. - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅಂದರೆ ಇಡೀ ಚುನಾವಣೆಯ ಫಲಿತಾಂಶ ನಿಮ್ಮ ನಗುವಿನ ಮೇಲೆ ಕೇಂದ್ರೀಕರಣವಾಗಿತ್ತು ಎಂದಾಯಿತು.

---------------------

(ಈ ಚುನಾವಣೆಯಲ್ಲಿ) ಸೋತವರದ್ದು ಸೋಲಲ್ಲ. - ಮಮತಾ ಬ್ಯಾನರ್ಜಿ, ಪ.ಬಂ. ಮುಖ್ಯಮಂತ್ರಿ
ಅದಕ್ಕಿಂತಲೂ ಮೇಲು.

---------------------

ಡಾ.ಬಿ.ಆರ್.ಅಂಬೇಡ್ಕರ್ ನನ್ನ ಬಾಲ್ಯದ ಹೀರೋ. - ತೇಜಸ್ವಿ ಸೂರ್ಯ, ಸಂಸದ
ನಿಮ್ಮ ಯೌವನದ ಹೀರೋ ಯಾರು ಎನ್ನುವುದು ಗೊತ್ತಿದೆ ಬಿಡಿ.

---------------------

ಎಚ್.ಡಿ.ದೇವೇಗೌಡರಿಗೆ ಹಾಸನ ಲೋಕಸಭಾ ಕ್ಷೇತ್ರ ಬಿಟ್ಟುಕೊಡುವೆ.- ಪ್ರಜ್ವಲ್‌ರೇವಣ್ಣ, ಸಂಸದ
ಹಾಸನದಲ್ಲೂ ಅವರ ಸೋಲು ನೋಡುವ ಆಸೆಯೇ?

---------------------

ಲೋಕಸಭಾ ಚುನಾವಣೆಯ ಫಲಿತಾಂಶ ನನ್ನ ಕಪಾಳಕ್ಕೆ ಜೋರಾಗಿ ಬಾರಿಸಿದಂತಾಗಿದೆ. - ಪ್ರಕಾಶ್‌ರೈ, ನಟ
ಅದು ನಿಮಗೆ ನಿಮ್ಮವರೇ ನೀಡಿದ ಕಪಾಳಮೋಕ್ಷ.

---------------------

ಅಪ್ಪ - ಮಕ್ಕಳು ( ದೇವೇಗೌಡ ಮತ್ತು ಮಕ್ಕಳು) ಸೇರಿ ಕಾಂಗ್ರೆಸನ್ನು ನಿರ್ನಾಮ ಮಾಡದಿದ್ದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಸದ್ಯಕ್ಕೆ ಬಿಜೆಪಿಯನ್ನು ನಿರ್ನಾಮ ಮಾಡುವ ಹೊಣೆಯನ್ನು ನೀವು ಹೊತ್ತಂತಿದೆ.

---------------------

ಕ್ರಿಕೆಟ್‌ನಲ್ಲಿ ಸೆಂಚೂರಿ ಬಾರಿಸಿಯೂ ತಂಡ ಸೋತಂತಾಗಿದೆ ನನ್ನ ಸ್ಥಿತಿ. - ಶಶಿ ತರೂರು, ಸಂಸದ
ತಾವು ಸೆಂಚೂರಿ ಬಾರಿಸುವುದಕ್ಕಾಗಿಯೇ ತಂಡವನ್ನು ಸೋಲಿಸಿದಿರಿ ಎಂಬ ಆರೋಪವಿದೆ.

---------------------

ಬಿಜೆಪಿಯ ಬಾಗಿಲು ಮುಚ್ಚಿಸುತ್ತೇನೆ ಎಂದವರ ಬಾಗಿಲು ಬಂದಾಗಿದೆ. - ಯಡಿಯೂರಪ್ಪ, ಮಾಜಿಮುಖ್ಯಮಂತ್ರಿ
ಇನ್ನುಳಿದಿರುವುದು ಬಿಜೆಪಿಯ ಬಾಗಿಲು ನಿಮ್ಮ ಪಾಲಿಗೆ ಮುಚ್ಚುವುದು.

---------------------

ಲೋಕಸಭೆ ಚುನಾವಣೆಯಲ್ಲಿ ಈ ಪರಿಯ ಸೋಲು ನಿರೀಕ್ಷಿಸಿರಲಿಲ್ಲ. - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಅಂತೂ ನಿರೀಕ್ಷಿಸಿದ್ದಕ್ಕಿಂತ ದೊಡ್ಡ ಸೋಲನ್ನು ಪಡೆದ ಸಂಭ್ರಮ.

---------------------
ಮಂಡ್ಯದ ಜನ ಒಂದು ಇತಿಹಾಸ ಸೃಷ್ಟಿಸಿದ್ದಾರೆ. - ಸುಮಲತಾ ಅಂಬರೀಷ್, ಸಂಸದೆ
ಜನಪ್ರತಿನಿಧಿಯಾಗಿ ಅಂಬರೀಷರನ್ನು ಅನುಸರಿಸದೇ, ನಿಜವಾದ ಅರ್ಥದಲ್ಲಿ ಜನಸೇವೆ ಮಾಡಿ.

---------------------
ಚುನಾವಣೆಗೆ ಬೇಸಿಗೆ ಕಾಲ ಸೂಕ್ತವಲ್ಲ - ನಿತೀಶ್‌ಕುಮಾರ್, ಬಿಹಾರ ಮುಖ್ಯಮಂತ್ರಿ
ಮಳೆಗಾಲದಲ್ಲಿ ಮತ್ತೊಮ್ಮೆ ಶುರುವಿನಿಂದಲೇ ಚುನಾವಣೆ ನಡೆಸೋಣವೆ?
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...