ದೇಶದ 10 ಅತ್ಯುತ್ತಮ ವಿವಿಗಳಿಗೆ ತಲಾ 100 ಕೋಟಿ ರೂ. ವಿಶೇಷ ನೆರವು

Update: 2019-05-27 04:00 GMT

ಮುಂಬೈ, ಮೇ 27: ದೇಶದ ಅತ್ಯುತ್ತಮ ಹತ್ತು ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ತಲಾ 100 ಕೋಟಿ ರೂಪಾಯಿಗಳ ವಿಶೇಷ ಅನುದಾನ ಕೇಂದ್ರದಿಂದ ಲಭ್ಯವಾಗಲಿದೆ. ಈ ವಿಶ್ವವಿದ್ಯಾನಿಲಯಗಳು ಇದಕ್ಕಾಗಿ ಈಗಾಗಲೇ ಕ್ಯಾಂಪಸ್ ಕಂಪೆನಿ ರಚಿಸಿಕೊಂಡಿದ್ದು, ಇದಕ್ಕೆ ಕೇಂದ್ರದ ನೇರ ನೆರವಿನ ಜತೆಗೆ, ಕಾರ್ನೆಲ್, ಯುಪೆನ್ ಮತ್ತು ಯುಸಿ ಬರ್‌ಕ್ಲೆ ಸೇರಿದಂತೆ ಏಳು ಅಮೆರಿಕನ್ ವಿವಿಗಳಿಂದ ವಿವಿಧ ವಿಷಯಗಳಲ್ಲಿ ಸೂಕ್ತ ಮಾರ್ಗದರ್ಶನ ದೊರಕಲಿದೆ.

ಪುಣೆಯ ಸಾವಿತ್ರಿಭಾಯಿ ಪುಲೆ ವಿವಿ, ಕೊಲ್ಕತ್ತಾದ ಜಾಧವಪುರ ವಿವಿ ಮತ್ತು ಹರ್ಯಾಣದ ಕುರುಕ್ಷೇತ್ರ ವಿವಿ ಈ ಹತ್ತು ಅಗ್ರ ವಿವಿಗಳ ಪಟ್ಟಿಯಲ್ಲಿವೆ. ನ್ಯಾಕ್ ರೇಟಿಂಗ್‌ನಲ್ಲಿ 3.51 ಅಂಕ ಪಡೆದ ವಿವಿಗಳನ್ನು ಕೇಂದ್ರದ ರಾಷ್ಟ್ರೀಯ ಉಚ್ಚತರ ಶಿಕ್ಷಣ ಅಭಿಯಾನ (ಆರ್‌ಯುಎಸ್‌ಎ) ಕಾರ್ಯಕ್ರಮದಡಿ ತಲಾ 100 ಕೋಟಿ ಅನುದಾನಕ್ಕೆ ಆಯ್ಕೆ ಮಾಡಲಾಗಿದೆ.  2020ರ ಮಾರ್ಚ್ ಒಳಗಾಗಿ ವೆಚ್ಚ ಮಾಡುವ ಷರತ್ತಿನಲ್ಲಿ ಅನುದಾನ ನೀಡಲಾಗುತ್ತಿದೆ.

ಈ ಕ್ಯಾಂಪಸ್ ಕಂಪೆನಿಗಳು ಹೆಚ್ಚುವರಿ ಸಂಪನ್ಮೂಲಗಳನ್ನು ಹೊರಗಿನಿಂದ ಕ್ರೋಡೀಕರಿಸಲು ಕೂಡಾ ಅವಕಾಶ ನೀಡಲಾಗಿದೆ. "ಸಾಧನೆ ಹಿನ್ನೆಲೆಯಲ್ಲಿ ಈ ವಿವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನಷ್ಟು ಮೇಲ್ದರ್ಜೆಗೇರಲು ಅಂದರೆ 3.51 ಅಂಕದಿಂದ 3.8 ಅಥವಾ 3.9ಕ್ಕೆ ಏರಲು ಸಾಕಷ್ಟು ಕೆಲಸ ಮಾಡಬೇಕಿದೆ" ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News