ಮೋದಿ ಪ್ರಮಾಣ ವಚನ ನಂತರ ಮೈತ್ರಿ ಸರಕಾರ ಪತನ: ಕೆ.ಎನ್.ರಾಜಣ್ಣ

Update: 2019-05-27 14:27 GMT

ತುಮಕೂರು,ಮೇ 27: ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತ್ರ ರಾಜ್ಯದಲ್ಲಿ ಮೈತ್ರಿ ಸರಕಾರ ಇರಲಿದೆ ಎಂದು ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 30ರ ವರೆಗೆ ಮಾತ್ರ ಸರಕಾರವಿರಲಿದ್ದು, ತದನಂತರ ಪತನಗೊಳ್ಳಲಿದೆ. ಝೀರೋ ಟ್ರಾಫಿಕ್ ಮಂತ್ರಿಯಾಗಿರುವ ಡಿಸಿಎಂ ಅವರನ್ನು ಶೀಘ್ರದಲ್ಲಿಯೇ ಝೀರೋ ಮಾಡುತ್ತೇವೆ ಎಂದರು.

ತುಮಕೂರು ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತ. ಆದರೂ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಗೆಲುವು ಸಾಧಿಸಿದ್ದಾರೆ.ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಸವರಾಜು 20 ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಬಿಜೆಪಿಗಿಂತ ಕಾಂಗ್ರೆಸ್ ನಾಯಕರ ಸಂಪರ್ಕ ಹೆಚ್ಚಿದೆ. ಅವರ ವೈಯಕ್ತಿಕ ಸಂಪರ್ಕದಿಂದ ಸಹಾಯ ಪಡೆದು ಗೆಲುವು ಸಾಧಿಸಿದ್ದಾರೆ ಎಂದರು.

ಐದು ವರ್ಷ ಪೂರ್ಣ: ಅಫೆಕ್ಸ್ ಬ್ಯಾಂಕ್ ವಿಚಾರದಲ್ಲಿ ಕೇಳಿಬಂದ ದೂರಿಗೆ ಉತ್ತರಿಸಿದ ಅವರು, ಯಾರು ಏನೇ ಮಾಡಿದರು ಪೂರೈಸುವುದು ಶತಸಿದ್ಧ. ರೇವಣ್ಣ ಬರಲಿ, ಅವರ ತಾತನೇ ಬರಲಿ, ಅವರ ಅಪ್ಪನೇ ಬರಲಿ ನಾನು ಐದು ವರ್ಷ ಅಧಿಕಾರ ಪೂರ್ಣಗೊಳಿಸುತ್ತೇನೆ. ರೇವಣ್ಣ ಕೆಎಂಎಫ್‍ನಲ್ಲಿ ಸಾವಿರಾರು ಕೋಟಿ ರೂ.ಗೋಲ್ ಮಾಲ್ ಮಾಡಿದ ದಾಖಲೆ ನನ್ನ ಬಳಿಯಿದೆ. ಅವರು ಏನು ಮಾಡುತ್ತಾರೋ ಮಾಡಲಿ. ಯಾವುದಕ್ಕೂ ಹೆದರುವ ಮಾತೇ ಇಲ್ಲ ಎಂದು ಕೆ.ಎನ್.ಆರ್.ತಿಳಿಸಿದರು.

ಸೋಲಿಗೆ ಝೀರೋ ಟ್ರಾಫಿಕ್ ಕಾರಣ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ಝೀರೋ ಟ್ರಾಫಿಕ್ ಮಂತ್ರಿ ಕಾರಣ. ಜಿಲ್ಲೆಗೆ ಒಮ್ಮೆ ಬಂದು ಹೋದರೆ 500 ಮತ ಕಡಿಮೆಯಾಗುತ್ತವೆ. ನಾನೇಕೆ ಕಾಂಗ್ರೆಸ್ ತೊರೆಯಲಿ. ಮೈತ್ರಿ ಪಕ್ಷದ ಅಭ್ಯರ್ಥಿ ಸೋಲಿಗೆ ಚುನಾವಣ ಉಸ್ತುವಾರಿ ಹೊಣೆ ಹೊತ್ತಿದ್ದವರೇ ಕಾರಣ. ನಾನು ಕಾಂಗ್ರೆಸ್ ತೊರೆದು ಹೋಗುವ ಪ್ರಶ್ನೆಯೇ ಇಲ್ಲ. ಇನ್ನು ಒಂದು ವಾರದಲ್ಲಿ ಝೀರೋ ಟ್ರಾಫಿಕ್ ಕೆಳಕ್ಕೆ ಇಳಿಯಲಿ ಎಂದರು.

ಧಿಕ್ಕಾರ ಕೂಗಿದರೆ ನಾಲಿಗೆ ಸೀಳುತ್ತೇನೆ: ದೇಶದಲ್ಲಿ ಕಾಂಗ್ರೆಸ್ ಸ್ಥಿತಿ ಬಗ್ಗೆ ಮಾತನಾಡಲು ನಿರಾಕರಿಸಿದ ಅವರು, ಕಾಂಗ್ರೆಸ್ ಕಚೇರಿಯಲ್ಲಿ ತಮಗೆ ಧಿಕ್ಕಾರ ಹಾಕಿದ್ದಾರೆ ಎಂಬ ಮಾಹಿತಿಯಿದೆ. ಇಲ್ಲಿ ಯಾರೋ ಶಾಮಿಯಾನ ಹಾಕಿಕೊಂಡು ತಮ್ಮ ಮೇಲೆ ಧಿಕ್ಕಾರ ಹಾಕಿದ್ದಾರೆ. ಯಾವನೇ ಆಗಲಿ ನನ್ನ ವಿರುದ್ಧ ಧಿಕ್ಕಾರ ಹಾಕಿದರೆ ಅವರ ನಾಲಿಗೆಯನ್ನು ನಾನೇ ಸೀಳುತ್ತೇನೆ. ದೊಡ್ಡವನೇ ಇರಲಿ, ಚಿಕ್ಕವನೇ ಇರಲಿ. ಇದು ನನ್ನ ಚಾಲೆಂಜ್ ಎಂದು ಅಬ್ಬರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News