ಬರದ ಛಾಯೆ ಇರುವ ಪ್ರದೇಶಗಳಲ್ಲಿ ಮೋಡ ಬಿತ್ತನೆ: ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ- ಕೃಷ್ಣಭೈರೇಗೌಡ

Update: 2019-05-27 14:29 GMT

ಬೆಂಗಳೂರು, ಮೇ 27: ಬರದ ಛಾಯೆ ಇರುವ ಪ್ರದೇಶಗಳಲ್ಲಿ 2019 ಮತ್ತು 2020ನೆ ಸಾಲಿನಲ್ಲಿ ಮೋಡಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದಕ್ಕಾಗಿ 2 ವಿಮಾನ ಹಾಗೂ 3 ರೇಡಾರ್‌ಗಳನ್ನು ಬಳಸಲು 93 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಅನುಮೋದನೆ ನೀಡಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 358 ಗ್ರಾಮ ಪಂಚಾಯತ್ ಕಾರ್ಯದರ್ಶಿ, ಗ್ರೇಡ್-11 ಹುದ್ದೆಗಳನ್ನು ತುಂಬಲು ಹಾಗೂ 95 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ತುಂಬಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕೃಷ್ಣಭೈರೇಗೌಡ ತಿಳಿಸಿದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಹೆಚ್ಚುವರಿ ವಾರ್ಡ್ ನಿರ್ಮಾಣಕ್ಕಾಗಿ 59 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ತೇರಗಾಂವ, ಕಾವಲವಾಡ ಮತ್ತು 91 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ 119 ಕೋಟಿ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಕೆರೆಗೆ ಹೇಮಾವತಿಯಿಂದ ನೀರು ಎತ್ತಿ, ಕುಡಿಯುವ ನೀರಿಗಾಗಿ ಏತ ನೀರಾವರಿ ನಾಲೆ ನಿರ್ಮಾಣ ಕಾಮಗಾರಿಗೆ 54 ಕೋಟಿ ರೂ., ಚಾಕೇನಹಳ್ಳಿ ಮತ್ತು 23 ಗ್ರಾಮಗಳ ಹಾಗೂ ಕೋಡಿಹಳ್ಳಿ ಹಾಗೂ ಇತರೆ 13 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 17.94 ಕೋಟಿ ರೂ. ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಒಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಮತ್ತು ಕರೇಕುಪ್ಪ ಗ್ರಾಮಗಳಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ಸಂಸ್ಥೆಗೆ ಎರಡು ಸಾವಿರ ಎಕರೆ ಹಾಗೂ ಯರಬನಹಳ್ಳಿ ಗ್ರಾಮದ 1666.73 ಎಕರೆಯ ಭೂಮಿಯನ್ನು ಲೀಸ್‌ನಿಂದ ಬದಲಾಯಿಸಿ ಕ್ರಯಪತ್ರ ಮಾಡಿಕೊಡಲು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರಾಮನಗರ ಜಿಲ್ಲೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ 61.24 ಕೋಟಿ ರೂ.ಗಳನ್ನು ಮಂಜೂರು ಮಾಡಲು ಹಾಗೂ ಕಾರ್ಕಳ ಪಟ್ಟಣದ ಹಾಲಿ ಒಳಚರಂಡಿ ಅಭಿವೃದ್ಧಿ ಯೋಜನೆಗಾಗಿ 13 ಕೋಟಿ ರೂ.ಗಳನ್ನು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಜೆಎನ್-ನರ್ಮ್ ಯೋಜನೆಯಡಿ ಮೈಸೂರು ನಗರಕ್ಕೆ 24x7 ನೀರು ಸರಬರಾಜು ಮಾಡುವ ಯೋಜನೆಗೆ ಕೇಂದ್ರ ಸರಕಾರದ ಪಾಲು 85.60 ಕೋಟಿ ರೂ.ಗಳನ್ನು ರಾಜ್ಯ ಸರಕಾರದಿಂದಲೇ ಒದಗಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಕೆಆರ್‌ಎಸ್ ಅಣೆಕಟ್ಟೆಯ ಎಡಭಾಗದ ವಿಶ್ವೇಶ್ವರಯ್ಯ ನಾಲೆಯ ಮುಖ್ಯ ನಾಲೆ ಮತ್ತು ಶಾಖಾ ನಾಲೆಗಳು ಶಿಥಿಲವಾಗಿರುವುದರಿಂದ ಇವುಗಳ ದುರಸ್ತಿ ಹಾಗೂ ಆಧುನೀಕರಣ ಕಾಮಗಾರಿಗಾಗಿ 522.37 ಕೋಟಿ ರೂ.ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಹಾಸನದಲ್ಲಿ ನೋ ಫ್ರಿಲ್ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ರೈಟ್ಸ್ ಸಂಸ್ಥೆಗೆ ತಾಂತ್ರಿಕ ಸಹಾಯ ಮತ್ತು ಮೂರನೇ ವ್ಯಕ್ತಿ ಪರಿವೀಕ್ಷಣಾ ಸೇವೆ ಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಮೈಸೂರಿನಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖೆಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚುವರಿಯಾಗಿ ಉಂಟಾಗಿರುವ ಮಾರ್ಪಾಡು ಕಾಮಗಾರಿಗಳಿಗೆ ಸೇರಿದಂತೆ 168.59 ಕೋಟಿ ರೂ.ಗಳ ಪರಿಷ್ಕೃತ ಮೊತ್ತಕ್ಕೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನೋಟಾ (NOTA) ಅಳವಡಿಸಲು ತೀರ್ಮಾನಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಸತಿ ಶಿಕ್ಷಣ ಸಂಸ್ಥೆಗಳ 15 ಪರಿಶಿಷ್ಟ ಜಾತಿ ಮತ್ತು ಪಂಗಡದ ವಿವಿಧ ವಸತಿ ಶಾಲೆಗಳ ಕಟ್ಟಡದ ನಿರ್ಮಾಣಕ್ಕೆ 377.15 ಕೋಟಿ ರೂ.ಗಳಿಗೆ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.

ಮದ್ದೂರು ಪಟ್ಟಣಕ್ಕೆ 2ನೇ ಹಂತದ ಒಳಚರಂಡಿ ಕಲ್ಪಿಸಲು 50.15 ಕೋಟಿ ರೂ.ಗಳ ಯೋಜನೆಗೆ ಹಾಗೂ ಹೇಮಾವತಿ ನದಿ ಮೂಲದಿಂದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿಗೆ ಸಮಗ್ರ ಕುಡಿಯುವ ನೀರು ಒದಗಿಸುವ ಯೋಜನೆಗಾಗಿ 62.45 ಕೋಟಿ ರೂ.ಗಳ ಕಾಮಗಾರಿಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಯಚೂರು ಹಾಗೂ ಯಾದಗಿರಿ ಸ್ನಾತಕೋತ್ತರ ಕೇಂದ್ರಗಳನ್ನು ಬೇರ್ಪಡಿಸಿ ಹೊಸದಾಗಿ ರಾಯಚೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ರಾಜ್ಯ ವಿಶ್ವವಿದ್ಯಾನಿಲಯಗಳ(ತಿದ್ದುಪಡಿ) ವಿಧೇಯಕ-2019ಕ್ಕೆ ಸುಗ್ರೀವಾಜ್ಞೆ ಹೊರಡಿಸಿ, ರಾಜ್ಯಪಾಲರ ಅನುಮೋದನೆಗೆ ಕಳುಹಿಸಿಕೊಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಯಚೂರು ವಿಶ್ವವಿದ್ಯಾನಿಲಯದ ಸ್ಥಾಪನೆಗಾಗಿ 6.99 ಕೋಟಿ ರೂ.ಗಳನ್ನು ಒದಗಿಸಲಾಗುವುದು.

-ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News