ಕ್ಷೌರಿಕ ವೃತ್ತಿ ನಿಂದನೆ ಆರೋಪ: ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹ

Update: 2019-05-27 15:03 GMT
ಶಾಸಕ ಯತ್ನಾಳ್

ಬೆಂಗಳೂರು, ಮೇ 27: ಸವಿತಾ ಸಮಾಜ ಹಾಗೂ ವೃತ್ತಿ ನಿಂದನೆ ಮಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಒತ್ತಾಯಿಸಿ ನಾಳೆ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಕಾರ್ಯದರ್ಶಿ ಜೆ.ಆರ್.ಅಭಿಷೇಕ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಟೀಕಿಸುವ ಭರದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪ, ಜನರ ಮಧ್ಯೆದಲ್ಲಿ ತಲೆಬೋಳಿಸುತ್ತಿದ್ದೀಯ ಎನ್ನುವ ಪದ ಬಳಕೆ ಮಾಡಿ, ಕ್ಷೌರಿಕ ವೃತ್ತಿಯನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿದರು.

ಇಂತಹ ಅವಹೇಳನಕಾರಿ ಹೇಳಿಕೆಯಿಂದಾಗಿ ಕ್ಷೌರಿಕ ವೃತ್ತಿ ಮಾಡುವವರಿಗೆ ಅಪಮಾನವಾಗಿದೆ. ಇದೇ ರೀತಿ ಅನೇಕ ಶಾಸಕರು ಪದೇ ಪದೇ ಕ್ಷೌರಿಕ ವೃತ್ತಿ ನಿಂದನೆ ಮಾಡುತ್ತಿದ್ದಾರೆ. ಈ ಹೇಳಿಕೆಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ. ಕೂಡಲೇ ಶಾಸಕರು ಈ ವಿಚಾರದ ಬಗ್ಗೆ ಕ್ಷಮೆಯಾಚಿಸಬೇಕು ಹಾಗೂ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಈ ಹೇಳಿಕೆ ಖಂಡಿಸಿ, ರಾಜ್ಯ ಸವಿತಾ ಸಮಾಜ ಸಂಘಟನೆಗಳು ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ಹಾಗೂ ವಿಧಾನಸಭಾ ಅಧ್ಯಕ್ಷರಿಗೆ ಶಾಸಕ ಬಸನಗೌಡ ಪಾಟೀಲ್ ವಿರುದ್ಧ ದೂರು ದಾಖಲಿಸಲು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಸವಿತಾ ಸಮಾಜ ಜಾತಿನಿಂದನೆ ಕಾಯ್ದೆಯಡಿ ದೂರು ದಾಖಲಿಸಲು ಅವಕಾಶ ಕಲ್ಪಿಸಬೇಕು. ಹಾಗೂ ಶಾಸಕ ಯತ್ನಾಳ್ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಂಘದ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News