ಗೌರಿ ಲಂಕೇಶ್ ಹತ್ಯೆ ಪ್ರಕರಣ: ಎಸ್‌ಐಟಿ ತಂಡಕ್ಕೆ 25 ಲಕ್ಷ ರೂ. ನಗದು ಬಹುಮಾನ

Update: 2019-05-27 15:13 GMT

ಬೆಂಗಳೂರು, ಮೇ 27: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ 16 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ  ಯಶಸ್ವಿಯಾದ ವಿಶೇಷ ತನಿಖಾ ತಂಡದ(ಎಸ್‌ಐಟಿ) ತನಿಖಾಧಿಕಾರಿಗಳಿಗೆ ರಾಜ್ಯ ಸರಕಾರ 25 ಲಕ್ಷ ರೂ. ನಗದು ಬಹುಮಾನ ಮಂಜೂರು ಮಾಡಿದೆ.

ಡಿವೈಎಸ್ಪಿಗಳಾದ ಕೆ.ಪಿ.ರವಿಕುಮಾರ್, ಟಿ.ರಂಗಪ್ಪ, ಎನ್.ಬಿ.ಸಕ್ರಿ, ಎಸ್.ಎಂ ನಾಗರಾಜ್  ಸೇರಿ ವಿವಿಧ ದರ್ಜೆಯ ಪೊಲೀಸ್ ಅಧಿಕಾರಿ, ಸಿಬ್ಬಂದಿ ಒಳಗೊಡಂತೆ ಒಟ್ಟು 91 ಮಂದಿಗೆ ಬಹುಮಾನ ನೀಡಲಾಗಿದೆ ಎಂದು ರಾಜ್ಯ ಸರಕಾರದ ಪ್ರಕಟನೆ ತಿಳಿಸಿದೆ.

2017ರ ಸಾಲಿನಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ವಾಸವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡು ಹಾರಿಸಿ, ಹತ್ಯೆಗೈದಿದ್ದರು. ಈ ಸಂಬಂಧ ಆರ್‌ಆರ್‌ನಗರ ಪೊಲೀಸ್ ಠಾಣೆಯಲ್ಲಿ ಕಲಂ 302, 120ಬಿ, 114 ಸೇರಿದಂತೆ ಇಂಡಿಯನ್ ಆರ್ಮ್ಸ್ ಆಕ್ಟ್ ಅಡಿ ಗಂಭೀರ ಪ್ರಕರಣ ದಾಖಲಾಗಿತ್ತು. ನಂತರ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತತ್ವದ ರಾಜ್ಯ ಸರಕಾರ ಹಿರಿಯ ಪೊಲೀಸ್ ಅಧಿಕಾರಿ ಬಿಜಯ್ ಕುಮಾರ್ ಸಿಂಗ್, ಎಂ.ಎನ್.ಅನುಚೇತ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿತ್ತು. 

ತನಿಖೆ ನಡೆಸಿದ ಅಧಿಕಾರಿಗಳು, ಪ್ರಕರಣ ಭೇದಿಸಿ ಇಲ್ಲಿಯವರೆಗೆ 16 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. 2018ರ ನವೆಂಬರ್‌ನಲ್ಲಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯೂ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಆರೋಪಿಗಳನ್ನು ಪತ್ತೆಹಚ್ಚಿದಲ್ಲಿ 25 ಲಕ್ಷ ರೂ.ಬಹುಮಾನ ನೀಡುವುದಾಗಿ ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದ್ದಾರೆ. ಅದರಂತೆ, ತನಿಖಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಸರಕಾರ ಬಹುಮಾನ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News