×
Ad

ಸಮ್ಮಿಶ್ರ ಸರಕಾರದಲ್ಲೇ ಕೂತರೆ ಕಾಂಗ್ರೆಸ್ ನೆಲ ಕಚ್ಚುತ್ತದೆ: ಪಕ್ಷದ ರಾಜ್ಯ ಉಪಾಧ್ಯಕ್ಷ ಆರ್.ರಾಜೇಂದ್ರ

Update: 2019-05-27 21:57 IST

ತುಮಕೂರು, ಮೇ 27: ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ಸ್ಥಾನ ಎಂದರೆ ಕಾಂಗ್ರೆಸ್‍ಗೆ ಒಂದು ಸ್ಥಾನ. ಜೆಡಿಎಸ್‍ಗೆ ಒಂದು ಸ್ಥಾನ. ಈ ಫಲಿತಾಂಶವನ್ನು ಕಂಡು ಸಹ ಸಮ್ಮಿಶ್ರ ಸರಕಾರದಲ್ಲೇ ಕೂತರೆ ಕಾಂಗ್ರೆಸ್ ಪಕ್ಷ ನೆಲ ಕಚ್ಚುವುದು ಶತಸಿದ್ಧ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ್ಷ ಆರ್.ರಾಜೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎಚ್.ಡಿ.ದೇವೇಗೌಡರಿಗೆ, ಕಾಂಗ್ರೆಸ್‍ಗಿಂತ ಜೆಡಿಎಸ್ ಪಕ್ಷದ ಮುಖಂಡರಿಗೆ ಇಷ್ಟವಿರಲಿಲ್ಲ. ಗೆದ್ದರೆ ಜಿಲ್ಲೆಯ ರಾಜಕೀಯ ಎಲ್ಲಿ ಹಾಸನಕ್ಕೆ ಮತ್ತು ಪದ್ಮನಾಗರ ನಗರಕ್ಕೆ ಶಿಫ್ಟ್ ಆಗುತ್ತದೆ ಎಂಬ ಭಯ ಆವರಿಸಿತ್ತು. ಇದರಿಂದ ಮೈತ್ರಿ ಅಭ್ಯರ್ಥಿ ಸೋತಿದ್ದಾರೆ ಎಂದು ವಿಶ್ಲೇಷಿಸಿದರು.

ಜನಾದೇಶಕ್ಕೆ ಎಲ್ಲರೂ ತಲೆಬಾಗಬೇಕು. ದೇಶದಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ. ಅದರಂತೆ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿ ಸಿಎಂ, ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಆದರೆ ಒಂದು ಕಡೆ ಜೆಡಿಎಸ್‍ನಿಂದ ನಮ್ಮ ಕಾರ್ಯಕರ್ತರು ತುಳಿತಕ್ಕೆ ಒಳಪಟ್ಟಿದ್ದೇವೆ. ಸಿದ್ದರಾಮಯ್ಯ ಆಡಳಿತ ಕಾಲದಲ್ಲಿ ಆದಂತಹ ಕೆಲಸಗಳು ಎಚ್‍ಡಿಕೆಯಿಂದ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಣದ ಆರೋಪದಿಂದ ಸೋಲು: ಎಸ್.ಪಿ.ಮುದ್ದಹನುಮೇಗೌಡ ಮತ್ತು ಕೆ.ಎನ್.ರಾಜಣ್ಣರ ಮೇಲೆ ಹಣ ಪಡೆದ ಆರೋಪ ಮಾಡಿದ್ದೇ ಮೈತ್ರಿ ಸೋಲಿಗೆ ಕಾರಣ. ಇದರಿಂದ ರಾಜಣ್ಣನವರ ಬೆಂಬಲಿಗರಿಗೆ ನೋವಾಗಿದೆ. ಹಾಗಾಗಿ ಫಲಿತಾಂಶದ ಮೇಲೆ ಪ್ರಭಾವ ಬೀರಿತು.ಕಾಂಗ್ರೆಸ್ ಪಕ್ಷ ಉಳಿಯಬೇಕಾದರೆ ರಾಷ್ಟ್ರಮಟ್ಟದ ನಾಯಕರು ಜೆಡಿಎಸ್ ಪಕ್ಷವನ್ನು ದೂರವಿಟ್ಟು ಚುನಾವಣೆ ಎದುರಿಸಬೇಕು. ಅವರ ಪ್ರಾಬಲ್ಯ ಕೇವಲ ಹಳೇ ಮೈಸೂರು ಭಾಗದಲ್ಲಿ ಮಾತ್ರ. ಮೈತ್ರಿ ಮುಂದುವರೆದರೆ ಒಂದು ಗ್ರಾಪಂ ನಲ್ಲೂ ಜಯಗಳಿಸಲು ಸಾಧ್ಯವಿಲ್ಲ ಎಂದರು.

ಸೊಸೆಯಂದಿರು ಕಾರಣ: ದೇವೇಗೌಡರು ಪರಾಭವಗೊಳ್ಳಲು ಅವರ ಸೊಸೆಯಂದಿರೇ ಕಾರಣ ಎಂದು ಹೊಳೆನರಸೀಪುರದ ಜನತೆ ಮಾತನಾಡುತ್ತಿದ್ದಾರೆ. ಇಬ್ಬರೂ ಸೊಸೆಯಂದಿರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಲೇಬೇಕು ಎಂದು ಒತ್ತಡ ಹಾಕಿದ್ದರು. ಅದರಂತೆ ಮಂಡ್ಯ ಮತ್ತು ಹಾಸನ ಕ್ಷೇತ್ರವನ್ನು ಮೊಮ್ಮಕ್ಕಳಿಗೆ ಬಿಟ್ಟು ತುಮಕೂರಿಗೆ ಬಂದರು. ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಅನುಭವಿಸಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿರಾ ತಾಪಂ ಮಾಜಿ ಅಧ್ಯಕ್ಷ ಮೂರ್ತಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶಶಿ ಹುಲಿಕುಂಟೆ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News