ಪ್ರಜ್ವಲ್ ರೇವಣ್ಣರ ಸಂಸದ ಸ್ಥಾನ ಅನರ್ಹಗೊಳಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2019-05-27 16:49 GMT

ಬೆಂಗಳೂರು, ಮೇ 27: ಹಾಸನ ಲೋಕಸಭಾ ಚುನಾವಣೆಯಲ್ಲಿ ನಾಮಪತ್ರದ ಜೊತೆಗೆ ಸುಳ್ಳು ಅಫಿಡವಿಟ್ ಸಲ್ಲಿಸಿ ಗೆದ್ದಿದ್ದಾರೆ ಎಂದು ಆರೋಪಿಸಿ, ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಸದ್ಯದಲ್ಲಿಯೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಪ್ರಜ್ವಲ್ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಯಾವುದೇ ಮಾಹಿತಿಯನ್ನು ನೀಡದೆ ಚುನಾವಣೆ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತ ದೇವರಾಜ ಗೌಡ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪ್ರಜ್ವಲ್ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಸುಮಾರು 12ಕ್ಕೂ ಹೆಚ್ಚು ಸುಳ್ಳು ಮಾಹಿತಿ ನೀಡಿದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದೇವರಾಜಗೌಡ ಮುಖ್ಯ ಚುನಾವಣಾ ಆಯೋಗಕ್ಕೆ ಪ್ರಜ್ವಲ್ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲನೆ ಮಾಡಿದ್ದ ಚುನಾವಣಾ ಆಯೋಗ, ಪ್ರಜ್ವಲ್ ಸಂಸದ ಸ್ಥಾನದ ಅನರ್ಹತೆ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸೂಚಿಸಿತ್ತು. ಅದರಂತೆ ಆದಾಯ ತೆರಿಗೆ ಇಲಾಖೆ ಮತ್ತು ಲೋಕಾಯುಕ್ತದಲ್ಲಿ ದಾಖಲೆಗಳನ್ನು ಕೇಳಿತ್ತು.

ಭ್ರಷ್ಟಾಚಾರ ವಿರೋಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಹಾಸನ ಕ್ಷೇತ್ರದಿಂದ ಪ್ರಜ್ವಲ್ ವಿರುದ್ಧ ಸೋತಿರುವ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ಕೂಡ ಪ್ರಜ್ವಲ್, ಅಧಿಕಾರ್ ವೆಂಚರ್ಸ್ ಲಿಮಿಟೆಡ್ ಮತ್ತು ಡ್ರೋಣ್ ವರ್ಕ್ಫೋರ್ಸ್ ಲಿಮಿಟೆಡ್ ಹೆಸರಿನ ಎರಡು ಕಂಪೆನಿಗಳಲ್ಲಿ ಈಗಲೂ ಪಾಲುದಾರರಾಗಿದ್ದಾರೆ. ಅದರಲ್ಲಿ ಹಣವನ್ನೂ ತೊಡಗಿಸಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆ ವೇಳೆ, ತಾವು ಷೇರುದಾರರಾಗಿರುವ ಕಂಪೆನಿ ಬಗ್ಗೆ ಉಲ್ಲೇಖ ಮಾಡದೇ ಸತ್ಯ ಮರೆ ಮಾಚಿದ್ದಾರೆ. ಹೀಗಾಗಿ, ಅವರ ನಾಮಪತ್ರ ತಿರಸ್ಕಾರ ಮಾಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News