ದೌರ್ಜನ್ಯ ಮುಂದುವರೆದರೆ ಸುಮ್ಮನೆ ಕೂರುವುದಿಲ್ಲ: ಸರಕಾರದ ವಿರುದ್ಧ ಚಲುವರಾಯಸ್ವಾಮಿ ಆಕ್ರೋಶ

Update: 2019-05-27 18:07 GMT

ಮಂಡ್ಯ, ಮೇ 27: ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಹೀಗೆ ಮುಂದುವರಿದರೆ ನಾವು ಸುಮ್ಮನೇ ಕೂರುವುದಿಲ್ಲ. ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎನ್.ಚಲುವರಾಯಸ್ವಾಮಿ ಗುಡುಗಿದ್ದಾರೆ.

ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪುರಸಭೆ ಚುನಾವಣೆ ನಂತರ ಪಕ್ಷದ ವರಿಷ್ಠರಾದ ಸಿದ್ದರಾಮಯ್ಯ, ದಿನೇಶ್ ಗುಂಡುರಾವ್, ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಕಾರ್ಯಕರ್ತರ ರಕ್ಷಣೆಗೆ ನಿಲ್ಲುವಂತೆ ಮನವಿ ಮಾಡುತ್ತೇವೆ ಎಂದರು.

ಚುನಾವಣೆ ನಂತರವೂ ಜೆಡಿಎಸ್ ದೌರ್ಜನ್ಯ ನಿಲ್ಲಬಹುದು ಎಂದುಕೊಂಡಿದ್ದೆವು. ಆದರೆ, ಕಡಿಮೆಯಾಗಿಲ್ಲ. ಕಾನೂನು ಬದ್ಧವಾಗಿದ್ದರೂ ಕಾಂಗ್ರೆಸ್ ಮುಖಂಡರು ನಡೆಸುತ್ತಿದ್ದ ಮದ್ದೂರು ಕ್ಲಬ್ ಮೇಲೆ ನಿನ್ನೆ ದಾಳಿಯಾಗಿದೆ. ಅಧಿಕಾರಿಗಳಿಗೆ ಶಾಸಕರು, ಜೆಡಿಎಸ್ ಮುಖಂಡರು, ಸರಕಾರದ ಕುಮ್ಮಕ್ಕಿದೆ ಎಂದು ಅವರು ಆರೋಪಿಸಿದರು.

ದ್ವೇಷ ರಾಜಕಾರಣ ಮುಂದುವರಿಯುತ್ತಲೇ ಇದೆ. ಮನ್‍ಮುಲ್ ಆಡಳಿತ ಮಂಡಳಿಯ ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಲಾಗಿದೆ. ಬೆಂಗಳೂರು ಡೇರಿ ಚುನಾವಣೆ ವಿಚಾರದಲ್ಲೂ ಸರಕಾರ ಹಸ್ತಕ್ಷೇಪ ಮಾಡುತ್ತಿದೆ. ಸರಕಾರದ ಈ ನಿರ್ಧಾರಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರುವ ಕೆ.ಎನ್.ರಾಜಣ್ಣ ವಿರುದ್ಧವೂ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ. ಜೈಲಿಗೆ ಹೋಗಿಬಂದ ಮಂಜುನಾಥ್ ಅವರನ್ನು ಬ್ಯಾಂಕ್ ಅಧ್ಯಕ್ಷಗಿರಿಗೆ ಕೂರಿಸಲು ಯತ್ನ ನಡೆಯುತ್ತಿದೆ. ಹಾಗಾಗಿ ಅಪೆಕ್ಸ್ ಬ್ಯಾಂಕ್‍ನ್ನು ಸೂಪರ್ ಸೀಡ್ ಮಾಡಲು ಸರಕಾರ ಹೊರಟಿದೆ ಎಂದೂ ಅವರು ದೂರಿದರು.

ಜನತೆ ಕೊಟ್ಟ ಪ್ರೀತಿ ಉಳಿಸಿಕೊಳ್ಳಲಿಲ್ಲ:
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಯ ಜನರು ಕೊಟ್ಟ ಪ್ರೀತಿ ಉಳಿಸಿಕೊಳ್ಳಲಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದರೆ ಹೀಗೇ ಆಗುತ್ತಿರಲಿಲ್ಲ ಎಂದು ಅವರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಸೋಲಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಮಂಡ್ಯ ಜನ ಪ್ರಬುದ್ಧರಿದ್ದಾರೆ. ಅವರಿಗೆ ಪ್ರೀತಿ ತೋರುವುದು ಗೊತ್ತು, ಮತ್ತೆ ಅದನ್ನು ವಾಪಸ್ ಪಡೆಯುವುದೂ ಗೊತ್ತು.  ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ನಮ್ಮನ್ನು ತಿರಸ್ಕರಿಸಿ ಅವರಿಗೆ ವೋಟ್ ಕೊಟ್ಟಿದ್ದರು. ಈಗ ಅವರನ್ನೂ ತಿರಸ್ಕರಿಸಿದ್ದಾರೆ ಎಂದು ಅವರು ಹೇಳಿದರು.

ಸೋತಿರುವವರ ವಿಶ್ವಾಸ ಏಕೆ ಬೇಕು ಎಂದು ಚುನಾವಣೆ ಪ್ರಚಾರ ವೇಳೆ ಹೇಳಿದ್ದಲ್ಲದೆ, 23ರ ಫಲಿತಾಂಶದ ನಂತರ ಉತ್ತರ ಕೊಡುತ್ತೇನೆ ಎಂದು ಹೇಳಿದ್ದವರು ಉತ್ತರ ಕೊಟ್ಟಿದ್ದಾರಾ? ಅವರ ರಾಜೀನಾಮೆ ನಾನು ಕೇಳುವುದಿಲ್ಲ. ಅವರ ರೀತಿ ನಾನು ಮಾತಾಡುವುದೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದರು.

ಮೈತ್ರಿ ಸರಕಾರ ಉಳಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರು ಈಗಾಗಲೇ ತೀರ್ಮಾನಿಸಿದ್ದಾರೆ. ಹಾಗಾಗಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಮಧ್ಯಂತರ ಚುನಾವಣೆಯ ಸೂಚನೆ ಇಲ್ಲ. ಇನ್ನೂ ನಾಲ್ಕು ವರ್ಷ ಸರಕಾರ ಇರುತ್ತದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ಚುನಾವಣೆ ವೇಳೆಯೇ ತಮ್ಮ ನಡವಳಿಕೆ ಮೂಲಕ ಸುಮಲತಾ ಅವರು ಅಭಿವೃದ್ಧಿ ಕೆಲಸ ಮಾಡುವ ಸಾಮರ್ಥ್ಯ ತೋರಿಸಿದ್ದಾರೆ. ಆ ಬಗ್ಗೆ ನನಗೂ ನಂಬಿಕೆ ಇದೆ. ಗೆದ್ದು ನಾಲ್ಕು ದಿನ ಆಗಿದೆ ಅಷ್ಟೆ. ಏಳು ಜನ ಶಾಸಕರು, ಮಂತ್ರಿಗಳು ತಮ್ಮ ಕೆಲಸ ಮಾಡಲಿ, ಸುಮಲತಾ ಅವರು ಅವರ ಕೆಲಸ ಮಾಡುತ್ತಾರೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ: ಇದಕ್ಕೂ ಮುನ್ನ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ನಾನು ಬಿಜೆಪಿಗೆ ಸೇರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಯಾವುದೇ ಬಿಜೆಪಿ ನಾಯಕರು ನನ್ನೊಂದಿಗೆ ಮಾತನಾಡಿಲ್ಲ. ಇದು ಕೇವಲ ಗಾಳಿಮಾತು ಎಂದು ಸ್ಪಷ್ಟಪಡಿಸಿದರು.

ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿ ಸೋಲಿಗೆ ನಾನು ಪ್ರಮುಖ ಕಾರಣ ಎನ್ನುವುದು ಗುಮಾನಿ ಅಷ್ಟೇ. ಜಿಲ್ಲೆಯ ಜನತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡಿದ್ದಾರೆ. ಹಾಗಾಗಿ ಅವರು ಗೆದ್ದಿದ್ದಾರೆ ಎಂದು ಅವರು ಹೇಳಿದರು.

ಮಾಜಿ ಶಾಸಕರಾದ ರಮೇಶ್‍ ಬಾಬು ಬಂಡಿಸಿದ್ದೇಗೌಡ, ಎಚ್.ಬಿ.ರಾಮು, ನಗರಸಭೆ ಸದಸ್ಯರಾದ ನಯೀಂ, ರಾಮಲಿಂಗಯ್ಯ, ಮುಖಂಡರಾದ ತ್ಯಾಗರಾಜು, ಹನಕೆರೆ ಶಶಿ, ಕಂಬದಹಳ್ಳಿ ಪುಟ್ಟಸ್ವಾಮಿ, ಅರವಿಂದ್, ಶಿವನಂಜು, ನವೀನ್‍ಕುಮಾರ್, ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News