ಶಿವಮೊಗ್ಗ: ತಾಲೂಕು ಪಂಚಾಯತ್ ಇಒ ಅತೀಕ್ ಪಾಷಾ ಎತ್ತಂಗಡಿಗೆ ಹುನ್ನಾರ ?

Update: 2019-05-27 18:23 GMT

ಶಿವಮೊಗ್ಗ, ಮೇ 27: ಜನಪರ ಕಾರ್ಯವೈಖರಿಯ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿರುವ, ಶಿವಮೊಗ್ಗ ತಾಪಂ ಅತೀಕ್ ಪಾಷಾರನ್ನು ಎತ್ತಂಗಡಿ ಮಾಡಿಸಲು ಕೆಲ ಪ್ರಭಾವಿಗಳು ಹುನ್ನಾರ ನಡೆಸುತ್ತಿರುವ ಆರೋಪಗಳು ಆಡಳಿತ ವಲಯದಿಂದ ಕೇಳಿಬರುತ್ತಿದೆ.

ಮೂಲತಃ ಕೋಲಾರ ಜಿಲ್ಲೆಯವರಾದ ಯುವ ಅಧಿಕಾರಿ ಅತೀಕ್ ಪಾಷಾ ಶಿವಮೊಗ್ಗ ತಾಪಂ ಇಒ ಆಗಿ ಆಗಮಿಸಿದ ಕೆಲ ತಿಂಗಳಲ್ಲಿಯೇ, ಆಡಳಿತದಲ್ಲಿ ಆಮೂಲಾಗ್ರ ಸುಧಾರಣೆಗೆ ಮುಂದಾಗಿದ್ದಾರೆ. ತಾಲೂಕಿನ ಗ್ರಾಮೀಣ ಭಾಗಗಳಲ್ಲಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಂಡಿದ್ದಾರೆ. ಕಾಲಮಿತಿಯಲ್ಲಿ ಕಡತ ವಿಲೇವಾರಿಗೆ ಆದ್ಯತೆ ನೀಡಿದ್ದಾರೆ. ಕಚೇರಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಿದ್ದಾರೆ. ಜನಪರ ಕೆಲಸಕಾರ್ಯ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ತಳೆಯುತ್ತಿದ್ದ ತಮ್ಮ ಕೆಳಹಂತದ ಅಧಿಕಾರಿ-ಸಿಬ್ಬಂದಿಗೆ ಚುರುಕು ಮುಟ್ಟಿಸುವ ಕಾರ್ಯ ನಡೆಸಿದ್ದಾರೆ. ಪ್ರಸ್ತುತ ಬೇಸಿಗೆ ಅವದಿಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರು ತೊಟ್ಟಿಗಳ ನಿರ್ಮಾಣಕ್ಕೆ ತ್ವರಿತಗತಿ ಕ್ರಮಕೈಗೊಳ್ಳುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆದರೆ ಇವರ ಜನಪರ ಕಾರ್ಯ ಸಹಿಸದ ಹಾಗೂ ನಾನಾ ಹಿತಾಸಕ್ತಿಯಿಟ್ಟುಕೊಂಡಿರುವ ಕೆಲ ಪ್ರಭಾವಿಗಳು, ತಮ್ಮ ಆಪ್ತೇಷ್ಟರನ್ನು ಇಒ ಕುರ್ಚಿಯಲ್ಲಿ ಕುರಿಸಲು ಹುನ್ನಾರ ನಡೆಸುತ್ತಿದ್ದಾರೆ. ಈ ಕಾರಣದಿಂದ ಅತೀಕ್ ಪಾಷಾರನ್ನು ವರ್ಗಾವಣೆ ಮಾಡಿಸಲು ಕುತಂತ್ರ ನಡೆಸುತ್ತಿದ್ದಾರೆ. ಸರಕಾರದ ಹಂತದಲ್ಲಿ ಲಾಬಿ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪೈಪೋಟಿ: ರಾಜಕೀಯ ಒತ್ತಡದ ಕಾರಣದಿಂದಲೇ, ಶಿವಮೊಗ್ಗ ತಾಪಂ ಇಒ ಸ್ಥಾನಕ್ಕೆ ಆಗಮಿಸಲು ಈ ಹಿಂದೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಆದರೆ ಬದಲಾದ ಸನ್ನಿವೇಶದಲ್ಲಿ ಶಿವಮೊಗ್ಗ ತಾಪಂ ಇಒ ಹುದ್ದೆಗೆ ಬರಲು ಪೈಪೋಟಿ ಕಂಡುಬರುತ್ತಿದೆ. ಕೆಲ ಅಧಿಕಾರಿಗಳು ರಾಜಕಾರಣಿಗಳ ಮೂಲಕ ಪ್ರಭಾವ ಬೀರಿ, ಇಒ ಸ್ಥಾನಕ್ಕೆ ಆಗಮಿಸುತ್ತಿರುವ ಮಾಹಿತಿಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News