ಅಲ್ಪಸಂಖ್ಯಾತರ ವಿರುದ್ಧದ ದುಷ್ಕೃತ್ಯಗಳನ್ನು ತಡೆಯಿರಿ: ಪ್ರಧಾನಿಗೆ ಪಾಪ್ಯುಲರ್ ಫ್ರಂಟ್ ಆಗ್ರಹ

Update: 2019-05-28 05:25 GMT

ಹೊಸದಿಲ್ಲಿ, ಮೇ 28: ಅಲ್ಪಸಂಖ್ಯಾತರ ಮೇಲಿನ ದುಷ್ಕೃತ್ಯಗಳನ್ನು ತಡೆಯುವುದರ ಮೂಲಕ ಎಲ್ಲರನ್ನೊಳಗೊಂಡ ಕಲ್ಪನೆಯ ತಮ್ಮ ಹೊಸ ಭರವಸೆಯ ಕುರಿತು ಕಾರ್ಯಾಚರಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಎಂ.ಮುಹಮ್ಮದ್ ಅಲಿ ಜಿನ್ನಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶದ ಗಂಟೆಯೊಳಗಾಗಿ, ಅಲ್ಪ ಸಂಖ್ಯಾತರ ಮೇಲೆ  ದಾಳಿ ನಡೆದಿರುವ ಘಟನೆಗಳು ವಿವಿಧ ರಾಜ್ಯಗಳಿಂದ ವರದಿಯಾಗಿವೆ. ಮಧ್ಯಪ್ರದೇಶದ ಸಿಯೋನಿಯಲ್ಲಿ ದನದ ಮಾಂಸ ಕೊಂಡೊಯ್ದರು ಎಂದು ಸುಳ್ಳು ಆರೋಪ ಹೊರಿಸಿ ಮುಸ್ಲಿಮ್ ದಂಪತಿ ಸೇರಿದಂತೆ, ಮೂವರು ಅಮಾಯಕರು ಗೋರಕ್ಷಾ ಗುಂಪಿನಿಂದ ಬರ್ಬರವಾಗಿ ಥಳಿತಕ್ಕೊಳಗಾಗಿದ್ದಾರೆ. ಹರ್ಯಾಣದ ಗುರ್ಗಾಂವ್ ನಲ್ಲಿ ಮುಸ್ಲಿಮ್ ಯುವಕನೊಬ್ಬನನ್ನು  ಟೋಪಿ ತೆಗೆಯುವಂತೆ ಮತ್ತು ಜೈ ಶ್ರೀರಾಮ್ ಕೂಗುವಂತೆ ಬಲವಂತಪಡಿಸಲಾಗಿದೆ. ಜಮ್ಮು ಕಾಶ್ಮೀರದ ಚಿನಾಬ್ ಕಣಿವೆಯಲ್ಲಿ ಮತ್ತೋರ್ವ ಅಮಾಯಕ ವ್ಯಕ್ತಿ ಗೋರಕ್ಷಕರ ಗುಂಡೇಟಿಗೆ ಬಲಿಯಾಗಿದ್ದಾನೆ. ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಯುವಕನ ಮೇಲೆ ಗುಂಡು ಹಾರಿಸಲಾಗಿದೆ. ಕೋಮು ಉದ್ವಿಗ್ನತೆಯ ಈ ರೀತಿಯ ಆಂತಕಕಾರಿ ನಿದರ್ಶನಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗುತ್ತಿವೆ.

ತಮ್ಮ ಪಕ್ಷದ ವ್ಯಾಪಕ ಗೆಲುವಿನ ಬಳಿಕ ‘ಎಲ್ಲರನ್ನೊಳಗೊಂಡ ಬಲಿಷ್ಠ ಭಾರತ’ ಕಟ್ಟುವ ನಿಟ್ಟಿನಲ್ಲಿ ಕಾರ್ಯಾಚರಿಸುವ ಭರವಸೆಯನ್ನು ನರೇಂದ್ರ ಮೋದಿ ನೀಡಿದ್ದರು. ಅಲ್ಪಸಂಖ್ಯಾತರ ನಡುವಿನ ಭಯವನ್ನು ಹೋಗಲಾಡಿಸುವುದಾಗಿಯೂ ಅವರು ಹೇಳಿದ್ದರು. ವಿಪರ್ಯಾಸವೆಂದರೆ, ಈ ದಾಳಿಗಳ ಹಿಂದಿರುವವರು ಅವರ ಪಕ್ಷದವರೇ ಆಗಿದ್ದಾರೆ. ಒಂದು ವೇಳೆ ಮೋದಿ ತಮ್ಮ ಭರವಸೆಗಳ ಕುರಿತು ಪ್ರಾಮಾಣಿಕರಾಗಿದ್ದರೆ, ಕ್ರಮ ಕೈಗೊಳ್ಳುವುದರ ಮೂಲಕ ಅವರ ಮಾತನ್ನು ಕಾರ್ಯರೂಪಕ್ಕಿಳಿಸಬೇಕಾಗಿದೆ. ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುತ್ತಾ ಹಾಗೂ ಹಿಂಸಾಚಾರದ ದುಷ್ಕರ್ಮಿಗಳನ್ನು ವಿಚಾರಣೆಗೆ ಗುರಿಪಡಿಸುವ ಮೂಲಕ ಮತ್ತು ನ್ಯಾಯ ಕಲ್ಪಿಸುವ ಮೂಲಕ ಮಾತ್ರವೇ ಮುಸ್ಲಿಮರ ನಡುವೆ ಸೃಷ್ಟಿಸಲಾಗಿರುವ ಭಯವನ್ನು ಹೋಗಲಾಡಿಸಬಹುದು ಎಂದು ಮುಹಮ್ಮದ್ ಅಲ್ಲಿ ಜಿನ್ನಾ ಪ್ರಕಟನೆಯಲ್ಲಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News