ಭೇಟಿಯಾಗಲು ನಿರಾಕರಿಸಿದ ರಾಹುಲ್: ಗೆಹ್ಲೋಟ್ ಸಿಎಂ ಕುರ್ಚಿಗೆ ಸಂಚಕಾರ

Update: 2019-05-28 06:00 GMT

ಜೈಪುರ್, ಮೇ 28: ಪಕ್ಷದ ಹಿತಾಸಕ್ತಿಗಿಂತಲೂ ತಮ್ಮ ಪುತ್ರನ ಹಿತಾಸಕ್ತಿ ಮೇಲಿರಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿರುವಂತೆಯೇ ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಯಾರು ಕಾರಣರೋ ಅವರನ್ನು ಜವಾಬ್ದಾರರನ್ನಾಗಿಸಿ ಕ್ರಮ ಕೈಗೊಳ್ಳಬೇಕೆಂದು ಹಲವಾರು ರಾಜಸ್ಥಾನ ಸಚಿವರು ಹಾಗೂ ಶಾಸಕರು ಬೇಡಿಕೆಯಿಟ್ಟಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ ದಿಲ್ಲಿಗೆ ಆಗಮಿಸಿದ್ದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾಗಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಗೆಹ್ಲೋಟ್ ಅವರಿಗೆ ರಾಹುಲ್ ಅವರನ್ನು ಭೇಟಿಯಾಗಲು ಸೋಮವಾರ ಪೂರ್ವಾಹ್ನ 11 ಗಂಟೆಗೆ ಸಮಯ ನಿಗದಿಯಾಗಿತ್ತು. ‘‘ಆದರೆ ಅವರನ್ನು ಭೇಟಿಯಾಗಲು ನಿರಾಕರಿಸಿದ ರಾಹುಲ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾಗುವಂತೆ ಸೂಚಿಸಿದ್ದರು’’ ಎಂದು ಮೂಲಗಳು ತಿಳಿಸಿವೆ.

ಗೆಹ್ಲೋಟ್ ನಂತರ ವೇಣುಗೋಪಾಲ್ ಹಾಗೂ ಪಕ್ಷ ನಾಯಕ ಅಹ್ಮದ್ ಪಟೇಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ಏನು ನಡೆಯಿತೆನ್ನುವ ಬಗ್ಗೆ ಮಾಹಿತಿಯಿಲ್ಲ.

ರವಿವಾರದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳುವುದರ ಜತೆಗೆ ಚುನಾವಣೆಯಲ್ಲಿ ಪಕ್ಷದ ಹಲವು ನಾಯಕರ ಪಾತ್ರದ ಬಗ್ಗೆ ನೇರಾನೇರ ಸರ್ಜಿಕಲ್ ವಿಶ್ಲೇಷಣೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

ತಮ್ಮ ಪುತ್ರ ವೈಭವ್ ಸ್ಪರ್ಧಿಸಿದ್ದ ಜೋಧಪುರ್ ಕ್ಷೇತ್ರದಲ್ಲಿಯೇ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಠಿಕಾಣಿ ಹೂಡಿ ದಿನಗಟ್ಟಲೆ ಅಲ್ಲಿ ಪ್ರಚಾರ ನಡೆಸಿ ರಾಜ್ಯದ ಇತರ ಭಾಗಗಳನ್ನು ನಿರ್ಲಕ್ಷ್ಯಿಸಿದ್ದರೆಂದು ಸಭೆಯಲ್ಲಿ ರಾಹುಲ್ ಆರೋಪಿಸಿದ್ದರು.

ಗೆಹ್ಲೋಟ್ ಅವರು ರಾಜ್ಯದಲ್ಲಿ 130 ರ್ಯಾಲಿಗಳಲ್ಲಿ ಹಾಗೂ ರೋಡ್ ಶೋ ಗಳಲ್ಲಿ ಭಾಗವಹಿಸಿದ್ದರೂ ಅವುಗಳಲ್ಲಿ 93 ರ್ಯಾಲಿಗಳು ಜೋಧಪುರ್ ಒಂದರಲ್ಲಿಯೇ ನಡೆದಿತ್ತು. ಇಷ್ಟಾದರೂ ಅವರ ಪುತ್ರ ಕೂಡ ಬಿಜೆಪಿ ಅಭ್ಯರ್ಥಿಯೆದುರು ಸೋಲು ಕಂಡಿದ್ದರು. ರಾಜ್ಯದಲ್ಲಿ ಬಿಜೆಪಿ ಒಟ್ಟು 25ರಲ್ಲಿ 24 ಸ್ಥಾನಗಳನ್ನು ಜಯಿಸಿದೆ.

ರಾಜಸ್ಥಾನದ ಸಹಕಾರಿ ಸಚಿವ ಉದಯ್ ಲಾಲ್ ಅಂಜನಾ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಮೇಶ್ ಮೀನಾ ಕೂಡ ಪ್ರತಿಕ್ರಿಯಿಸಿ ಸೋಲಿಗೆ ಕಾರಣಗಳೇನೆಂದು ಕಂಡುಹಿಡಿದು ಮುಂದಿನ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಇನ್ನೂ ಉತ್ತಮ ನಿರ್ವಹಣೆ ತೋರಲು ಶ್ರಮಿಸಬೇಕೆಂದು ಹೇಳಿದ್ದಾರೆ.

ತರುವಾಯ ಕೃಷಿ ಸಚಿವ ಲಾಲಚಂದ್ರ ಕಟಾರಿಯಾ ಪಕ್ಷದ ಕಳಪೆ ನಿರ್ವಹಣೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾರೆಂದು ಹೇಳಲಾಗಿದೆಯಾದರೂ ಈ ಸುದ್ದಿ ಇನ್ನೂ ದೃಢಪಟ್ಟಿಲ್ಲ.

ಗೆಹ್ಲೋಟ್ ಹೊರತಾಗಿ ರಾಹುಲ್ ಅವರು ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಹಾಗೂ ಮಧ್ಯ ಪ್ರದೇಶ ಸೀಎಂ ಕಮಲ್ ನಾಥ್ ಅವರನ್ನೂ ಟೀಕಿಸಿದ್ದರು. ಮೂವರೂ ತಮ್ಮ ಪುತ್ರರಿಗೆ ಟಿಕೆಟ್‌ಗಾಗಿ ಬಹಳ ಲಾಬಿ ನಡೆಸಿದ್ದರು. ಆದರೆ ಚಿದಂಬರಂ ಹಾಗೂ ಕಮಲ್ ನಾಥ್ ಪುತ್ರರು ಚುನಾವಣೆ ಗೆದ್ದಿದ್ದಾರೆ.

ಕಾರ್ಯಕಾರಿಣಿ ಸಭೆಗೆ ಗೈರಾಗಿದ್ದ ಕಮಲ್ ನಾಥ್ ಬಗ್ಗೆ ಪ್ರತಿಕ್ರಿಯಿಸಿದ್ದ ರಾಹುಲ್, ‘‘ತಮ್ಮ ಪುತ್ರನನ್ನು ಕಣಕ್ಕಿಳಿಸದೇ ಇದ್ದರೆ ತಾವು ಹೇಗೆ ಸಿಎಂ ಆಗಲು ಸಾಧ್ಯ ಎಂದು ಅವರು ಹೇಳಿದ್ದರು’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News