ಐಪಿಎಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ: ಕಾಫಿನಾಡಿನ ಜನರಲ್ಲಿ ಬೇಸರ

Update: 2019-05-28 17:45 GMT

ಚಿಕ್ಕಮಗಳೂರು, ಮೇ 28: ಖಡಕ್ ಐಪಿಎಸ್ ಅಧಿಕಾರಿ ಎಂದು ಖ್ಯಾತಿ ಪಡೆದಿರುವ ಕೆ.ಅಣ್ಣಾಮಲೈ ತಮ್ಮ ವೃತ್ತಿಗೆ ರಾಜೀನಾಮೆ ನೀಡಿರುವ ಸಂಗತಿ ಕಾಫಿನಾಡಿನ ಜನರಲ್ಲಿ ಬೇಸರಕ್ಕೆ ಕಾರಣವಾಗಿದೆ.

ಕೆ.ಅಣ್ಣಾಮಲೈ ಅವರನ್ನು ರಾಜ್ಯ ಸರಕಾರ ಡಿಸೆಂಬರ್ 2017ರಲ್ಲಿ ಚಿಕ್ಕಮಗಳೂರು ಎಸ್ಪಿಯಾಗಿ ನೇಮಕ ಮಾಡಿತ್ತು. ಸೆಪ್ಪೆಂಬರ್ 2018ರಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ ಕೆ. ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುವ ಮೊದಲೇ ಉಡುಪಿಯಲ್ಲಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ‘ಖಡಕ್ ಅಧಿಕಾರಿ’ ‘ಕರ್ನಾಟಕದ ಸಿಂಗಂ’ ಎಂಬ ಖ್ಯಾತಿ ಪಡೆದುಕೊಂಡರು. ಡಿಸೆಂಬರ್ 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಎಸ್ಪಿಯಾಗಿ ನೇಮಕವಾಗುತ್ತಿದಂತೆ ಅಣ್ಣಾಮಲೈ ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಹಾಗೂ ಭ್ರಷ್ಟಮುಕ್ತ ಮಾಡುವಲ್ಲಿ ಯಶಸ್ವಿಯಾದರು ಕೆಲವೊಂದು ದಿಟ್ಟ ನಿರ್ಧಾರದಿಂದ ಮಲೆನಾಡಿನ ಜನತೆಯ ಪ್ರೀತಿ, ವಿಶ್ವಾಸ ಗಳಿಸಿದ್ದರು.

ಅಣ್ಣಾಮಲೈ ಎಸ್ಪಿಯಾಗಿದ್ದ ವೇಳೆ ಇಲಾಖೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿ ಹಾಡಿದ್ದರು. ಇಲಾಖೆಯಲ್ಲಿ ದೇಹತೂಕವನ್ನು ಹೆಚ್ಚಿಸಿಕೊಂಡ ಪೊಲೀಸ್ ಸಿಬ್ಬಂದಿ ತಮ್ಮ ದೇಹತೂಕವನ್ನು ಇಳಿಸಿಕೊಂಡಲ್ಲಿ ಜಿಲ್ಲೆಯ ಯಾವ ಭಾಗಕ್ಕೆ ವರ್ಗಾವಣೆ ಬಯಸುತ್ತಾರೋ ಆ ಜಾಗಕ್ಕೆ ವರ್ಗಾವಣೆ ಮಾಡುವುದಾಗಿ ಘೋಷಿಸಿದರು. ಅದರಂತೆ ಕೆಲ ಸಿಬ್ಬಂದಿ ತಮ್ಮ ದೇಹತೂಕವನ್ನು ಇಳಿಸಿಕೊಂಡು ವರ್ಗಾವಣೆಯಾಗಿದ್ದರು.

ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಅತ್ಯಂತ ಪ್ರೀತಿ, ಕಾಳಜಿಯಿಂದ ಕಾಣುತ್ತಿದ್ದ ಅಣ್ಣಾಮಲೈ ಯಾವಾಗಲೂ ಕೂಡ ತಮ್ಮ ಸಿಬ್ಬಂದಿ ಬೆನ್ನಿಗೆ ನಿಲ್ಲುತ್ತಿದ್ದರು. ಕಳೆದ ಬಾರಿ ದತ್ತ ಜಯಂತಿ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನಡೆಸಿದ ಕೃತ್ಯದಿಂದ ದತ್ತಪೀಠದಲ್ಲಿ ಗಲಾಟೆ ಹಾಗೂ ನಗರದಲ್ಲಿ ಕೋಮುಗಲಭೆ ನಡೆಯುವ ಸಂಭವವಿತ್ತು. ಈ ಸಂದರ್ಭದಲ್ಲಿ ಸೂಕ್ಷ್ಮವಾಗಿ ಕಾರ್ಯನಿರ್ವಹಿಸಿ ಕೋಮುಗಲಭೆಗೆ ಅವಕಾಶ ನೀಡದೆ ಜನರಿಂದ ಪ್ರಶಂಸೆಗೆ ಒಳಗಾದರು. ಮಾನವೀಯ ನೆಲೆಯಲ್ಲಿ ಯೋಚಿಸುತ್ತಿದ್ದ ಅಣ್ಣಾಮಲೈ ಅವರನ್ನು ನೋಡಬೇಕು. ಅವರೊಂದಿಗೆ ಮಾತನಾಡಬೇಕೆಂದು ನಗರದ ವೃದ್ಧಾಶ್ರಮದ ವೃದ್ಧರು ಇಂಗಿತ ವ್ಯಕ್ತಪಡಿಸಿದಾಗ ಅಣ್ಣಾಮಲೈ ಅವರು ತಮ್ಮ ಕಾರ್ಯ ಒತ್ತಡದ ನಡುವೆ ವೃದ್ಧಾಶ್ರಮಕ್ಕೆ ಭೇಟಿನೀಡಿ ಹಿರಿಯ ಜೀವಿಗಳ ನೋವು ಆಲಿಸಿದರು. ಅವರ ಸಂಬಂಧಿಕರ ಮನವೊಲಿಸುವ ಭರವಸೆಯನ್ನು ಆ ವೃದ್ಧ ಜೀವಗಳಿಗೆ ನೀಡಿದರು. ಈ ಮೂಲಕ ತಾನೊಬ್ಬ ದಕ್ಷ ಅಧಿಕಾರಿ ಮಾತ್ರವಲ್ಲ ಮಾನವೀಯ ಮೌಲ್ಯವಿರುವ ಅಧಿಕಾರಿ ಎಂಬುದನ್ನು ಸಾಬೀತು ಮಾಡಿದ್ದರು.

ಈ ರೀತಿಯ ಕಾರ್ಯವೈಖರಿಯಿಂದ ಜನಮಾನಸದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದ ಅಣ್ಣಮಲೈ ಜಿಲ್ಲೆಯಲ್ಲಿ ಮಟ್ಕಾದಂಧೆ, ಬೆಂಟಿಂಗ್, ಇಸ್ಪೀಟ್, ಸೇರಿದಂತೆ ಅನೇಕ ಸಮಾಜಘಾತುಕ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದರು. ಇಂತಹ ದಕ್ಷ ಅಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಮಲೆನಾಡಿನ ಜನತೆಯಲ್ಲೂ ಬೇಸರ ಮೂಡಿಸಿದೆ. ಇಂತಹ ಅಧಿಕಾರಿಗಳು ಸೇವೆ ಪೊಲೀಸ್ ಇಲಾಖೆಗೆ ಬೇಕಿದೆ. ಅಣ್ಣಾಮಲೈ ತಮ್ಮ ನಿರ್ಧಾರವನ್ನು ಬದಲಿಸಲಿ ಎಂದು ಜನರು ಆಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News