ಪುಂಡಾಟ ಮಾಡಿದ ಹೆಣ್ಣಾನೆ ಸೆರೆ: ನೆಲ್ಯಹುದಿಕೇರಿಯಲ್ಲಿ ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ

Update: 2019-05-28 17:50 GMT

ಮಡಿಕೇರಿ, ಮೇ 28: ಸಿದ್ದಾಪುರದ ನೆಲ್ಯಹುದಿಕೇರಿ ವ್ಯಾಪ್ತಿಯ ನಲ್ವತ್ತೆಕ್ರೆ ಬೆಟ್ಟದಕಾಡು ಸುತ್ತಮುತ್ತ ಪುಂಡಾಟ ಮಾಡುತ್ತಿದ್ದ ಹೆಣ್ಣು ಕಾಡಾನೆಯನ್ನು ಸರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.

ಸೋಮವಾರ ಸಂಜೆಯಿಂದಲೇ ಕಾಡಾನೆಯ ಚಲನವಲನದ ಮೇಲೆ ನಿಗಾ ಇರಿಸಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಮಂಗಳವಾರ ಮಧ್ಯಾಹ್ನದ ವೇಳೆಗೆ ಸಾಕಾನೆಗಳ ಸಹಕಾರದಿಂದ ತೋಟದೊಳಗಿದ್ದ ಕಾಡಾನೆಯನ್ನು ಸೆರೆ ಹಿಡಿದರು. ವೈದ್ಯಾಧಿಕಾರಿ ಡಾ.ಮುಜೀಬ್ ಅವರ ಮಾರ್ಗದರ್ಶನದಂತೆ ಕಾಡಾನೆಗಳ ಹಿಂಡಿನಲ್ಲಿದ್ದ ಹೆಣ್ಣು ಪುಂಡಾನೆಗೆ ಅರವಳಿಕೆ ಗುಂಡನ್ನು ಹಾರಿಸಲಾಯಿತು. ನಂತರ ಸಾಕಾನೆಗಳ ಸಹಾಯದಿಂದ ಮುಖ್ಯ ರಸ್ತೆಗೆ ಕರೆತಂದು ಲಾರಿ ಮೂಲಕ ಕುಶಾಲನಗರದ ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. 

ಕಾರ್ಯಾಚರಣೆಯಲ್ಲಿ ಡಿಎಫ್‍ಓ ಮಂಜುನಾಥ್, ವೈದ್ಯಾಧಿಕಾರಿ ಮುಜೀಬ್, ಎಸಿಎಫ್ ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ಅರುಣ್, ಉಪವಲಯ ಅರಣ್ಯಾಧಿಕಾರಿಗಳಾದ ರಂಜನ್, ವಿಲಾಸ್, ಸಿಬ್ಬಂದಿಗಳು, ಮಾವುತರು ಹಾಗೂ ಕಾವಾಡಿಗಳು ಪಾಲ್ಗೊಂಡಿದ್ದರು.

ಅಭ್ಯತ್ಮಂಗಲ ಗ್ರಾಮದ ಸಮೀಪ ಕಾಡಾನೆ ಸೆರೆಗೆ ಸಿದ್ಧತೆ ನಡೆಸಲಾಗಿತ್ತು. ದುಬಾರೆ ಹಾಗೂ ಮತ್ತಿಗೋಡು ಆನೆ ಶಿಬಿರದ ಹರ್ಷ, ಕೃಷ್ಣ, ಅಭಿಮನ್ಯು, ಧನಂಜಯ, ಲಕ್ಷ್ಮಣ, ಈಶ್ವರ, ಅಜಯ್, ವಿಕ್ರಮ್ ಆನೆಗಳೊಂದಿಗೆ ಸುಮಾರು ಐವತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಕಾಡಾನೆ ಇರುವಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಇಂದು ಬೆಳಗಿನಿಂದಲೇ ಕಾರ್ಯಾಚರಣೆ ನಡೆಸಿದರು. 

ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಪಿಂಟೊ ಅವರ ಕಾಫಿ ತೋಟದಲ್ಲಿ 10 ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಇರುವುದನ್ನು ಗಮನಿಸಿದ ಸಿಬ್ಬಂದಿಗಳು ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು. 

ಶಾಶ್ವತ ಪರಿಹಾರ
ಡಿಎಫ್‍ಒ ಮಂಜುನಾಥ್ ಮಾತನಾಡಿ ಕಾಫಿತೋಟಗಳಲ್ಲಿ ಬೀಡು ಬಿಟ್ಟು ಕಾರ್ಮಿಕರು ಹಾಗೂ ಗ್ರಾಮಸ್ಥರಿಗೆ ಆತಂಕ ಸೃಷ್ಟಿ ಮಾಡುತ್ತಿದ್ದ ಹೆಣ್ಣಾನೆಯನ್ನು ಸೆರೆ ಹಿಡಿಯಲಾಗಿದೆ. ಎರಡು ಪುಂಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಇನ್ನು ಎರಡು ದಿನಗಳಲ್ಲಿ ಮತ್ತೊಂದು ಗಂಡಾನೆಯನ್ನು ಸೆರೆಹಿಡಿಯಲು ಮುಂದಾಗುವುದಾಗಿ ಹೇಳಿದರು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆಗಳನ್ನು ರೂಪಿಸಿದ್ದು ದುಬಾರೆ ವ್ಯಾಪ್ತಿಯಲ್ಲಿ ರೈಲ್ವೆ ಕಂಬಿಗಳ ಅಳವಡಿಸುವ ಕಾರ್ಯ ಸದ್ಯದಲ್ಲೇ ನಡೆಯಲಿದೆ ಎಂದರು.

ಡಾ.ಮುಜೀಬ್ ಮಾತನಾಡಿ ಇದುವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹದಿನೈದು ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ ಹಾಗೂ ಹದಿನೈದಕ್ಕೂ ಹೆಚ್ಚು ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News