ಸಚಿವ ಪುಟ್ಟರಂಗ ಶೆಟ್ಟಿಗೆ ಸಿದ್ದರಾಮಯ್ಯ ತರಾಟೆ
Update: 2019-05-28 23:25 IST
ಮೈಸೂರು,ಮೇ.28: ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ ಅವರನ್ನು ನೋಡಲು ಅವರ ಮನೆಗೆ ಮಂಗಳವಾರ ಸಚಿವ ಪುಟ್ಟರಂಗಶೆಟ್ಟಿ ಆಗಮಿಸಿದ್ದರು. ಈ ವೇಳೆ ಅವರನ್ನು ಕಂಡ ತಕ್ಷಣ ಗರಂ ಆದ ಸಿದ್ದರಾಮಯ್ಯ, ಏನಯ್ಯಾ, ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ ಅವರಿಗೆ ನಿನ್ನ ಕ್ಷೇತ್ರದಲ್ಲೇ ಲೀಡ್ ಬರಲಿಲ್ಲವಂತೆ, ನೀನೊಬ್ಬ ಲೀಡರ ಎಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ಇದರಿಂದ ತಬ್ಬಿಬ್ಬಾದ ಸಚಿವರು ಇಲ್ಲಾ ಸಾರ್, ಅದೇನೋ ತಪ್ಪಾಗಿದೆ ಎಂದಿದ್ದಾರೆ.
ನಂತರ ಸಿದ್ದರಾಮಯ್ಯ ಬೆಂಗಳೂರಿಗೆ ತೆರಳುವ ಮುನ್ನ ಮೃಗಾಲಯದ ಬಳಿ ಇರುವ ರೆಫ್ರೆಶ್‍ಮೆಂಟ್ ಹೋಟೆಲ್‍ಗೆ ತೆರಳಿ ಕಾರಿನಲ್ಲೇ ಕುಳಿತು ತಿಂಡಿ ಸವಿದು ನಂತರ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.