ಕಾವೇರಿ ನೀರು ಹಂಚಿಕೆಯಲ್ಲಿ ರಾಜಕೀಯ ಬೇಡ: ಮಂಡ್ಯ ಸಂಸದೆ ಸುಮಲತಾ

Update: 2019-05-29 12:27 GMT

ಬೆಂಗಳೂರು, ಮೇ 29: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಕೀಯ ಮುಖಂಡರು ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಬೇಡ. ಒಗ್ಗಟ್ಟಿನಿಂದ ಸೂಕ್ತ ತೀರ್ಮಾನ ಕೈಗೊಳ್ಳುವ ಸಮಯವಿದು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

ಬುಧವಾರ ಹಿರಿಯ ನಟ ಅಂಬರೀಶ್ 67ನೇ ಹುಟ್ಟು ಹಬ್ಬದ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಿನ ವಿಷಯದಲ್ಲಿ ರಾಜಕಾರಣ ಮಾಡಬಾರದು. ರಾಜ್ಯ ಹಾಗೂ ಕೇಂದ್ರ ಸರಕಾರ ಒಮ್ಮತದಿಂದ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದರು.

ಕಾವೇರಿ ವಿಷಯದಲ್ಲಿ ನನ್ನ ಕೆಲಸ ನಾನು ಮಾಡುತ್ತೇವೆ. ಕೇವಲ ಪ್ರಚಾರಕ್ಕಾಗಿ ಈ ವಿಷಯದಲ್ಲಿ ನನ್ನ ಹೆಸರನ್ನು ಎಳೆದು ತರುವುದು ಬೇಡ. ಚುನಾವಣಾ ಪ್ರಚಾರದಲ್ಲಿ ನನ್ನ ವಿರುದ್ಧ ಹೇಗೆಲ್ಲಾ ಅಪಪ್ರಚಾರ ಮಾಡಿದ್ದಾರೆ ಎಂಬುದು ಗೊತ್ತಿದೆ. ಇಂತಹ ಅಪಪ್ರಚಾರದಿಂದ ರೈತರ ಸಮಸ್ಯೆ ಪರಿಹಾರವಾಗಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದು ಅವರು ಹೇಳಿದರು.

ಮಂಡ್ಯದ ಸಾಮಾನ್ಯ ಜನತೆ ನನಗೆ ಮುಖ್ಯ. ಅವರಿಗಾಗಿ ಕೆಲಸ ಮಾಡುತ್ತೇನೆಯೆ ವಿನಃ ವಿರೋಧಿಗಳ ಬಗ್ಗೆ ಯೋಚನೆ ಮಾಡಲ್ಲ. ನಟ, ಮಾಜಿ ಸಚಿವ ಅಂಬರೀಶ್ ಎಲ್ಲೂ ಹೋಗಿಲ್ಲ. ನಮ್ಮ ಜೊತೆಯಲ್ಲೇ ಇದ್ದಾರೆಂಬ ನಂಬಿಕೆಯಿದೆ. ಜನ ನನ್ನ ಮೇಲೆ ನಂಬಿಕೆಯಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಆ ನಂಬಿಕೆಯನ್ನ ಉಳಿಸಿಕೊಂಡು ಹೋಗ್ತೀನಿ. ಅಂಬರೀಶ್ ಅವರ ಹೆಸರಿಗೆ ಕಳಂಕ ಬರದಂತೆ ನಡೆದುಕೊಳ್ತೀನಿ ಎಂದು ಅವರು ಹೇಳಿದರು.

ಅಂಬರೀಶ್ 67ನೆ ಹುಟ್ಟುಹಬ್ಬದ ಪ್ರಯುಕ್ತ ಸಾವಿರಾರು ಅಭಿಮಾನಿಗಳು ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ನಮನ ಸಲ್ಲಿಸಿ ಜೈಕಾರ ಹಾಕಿದರು. ಈ ವೇಳೆ ಮಂಡ್ಯದ ಮಳವಳ್ಳಿಯ ನಾಗೇಶ್ ಸ್ಮಾರಕದ ಮುಂದೆ ಮದುವೆ ಆಹ್ವಾನ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅವರು, ನಲವತ್ತು ವರ್ಷಗಳಿಂದ ಅಂಬರೀಶ್ ಅಭಿಮಾನಿ. ಅವರು ಅಂದರೆ ಪಂಚಪ್ರಾಣ ನನಗೆ. ಅವರ ಪ್ರತಿ ಹುಟ್ಟುಹಬ್ಬಕ್ಕೂ ಬಂದು ಶುಭ ಹಾರೈಸುತ್ತಿದ್ದೆ. ಅದರೆ, ಈ ಬಾರಿ ಅವರಿಲ್ಲ ಎಂಬುದೇ ಬೇಸರ. ಮದುವೆಗೆ ಅಂಬಿಯಣ್ಣನನ್ನು ಆಹ್ವಾನಿಸುವ ಆಸೆಯಿತ್ತು. ಅವರಿಲ್ಲದ ಕಾರಣ ಅವರ ಸಮಾಧಿ ಬಳಿ ಲಗ್ನಪತ್ರಿಕೆ ಇಟ್ಟು ಆಶೀರ್ವಾದ ಪಡೆದಿದ್ದೇನೆ ಅಂತಾ ಭಾವುಕರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News