ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೆಂಕಿ ಅವಘಡ
Update: 2019-05-29 18:01 IST
ಬೆಂಗಳೂರು, ಮೇ 29: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಳಿಯ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಅಪಾರ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.
ಬುಧವಾರ ಇಲ್ಲಿನ ಕೆಐಎಎಲ್ನ ಟರ್ಮಿನಲ್ ಮುಂಭಾಗದ ಬುರಿಟೋ ಬಾಯ್ಸ್ ಹೆಸರಿನ ಸಿಹಿ-ತಿಂಡಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರ ಪರಿಣಾಮ ಕೆಲ ಕಾಲ ವಿಮಾನ ನಿಲ್ದಾಣದ ತುಂಬಾ ದಟ್ಟ ಹೊಗೆ ಬೆಂಕಿ ಆವರಿಸಿಕೊಂಡಿತ್ತು. ಇದನ್ನು ಕಂಡ ಪ್ರಯಾಣಿಕರು, ಸ್ಥಳೀಯರು ಕ್ಷಣ ಕಾಲ ಆತಂಕಕ್ಕೀಡಾಗಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿ, ಆಗುವ ಅನಾಹುತ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.