ರೈತರ ಸಮಸ್ಯೆ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ: ಸುಮಲತಾ

Update: 2019-05-29 17:24 GMT

ಮಂಡ್ಯ, ಮೇ 29: ಲೋಕಸಭಾ ಚುನಾವಣೆಯಲ್ಲಿ ತನಗೆ ಅಭೂತಪೂರ್ವ ಗೆಲುವ ತಂದುಕೊಟ್ಟ ಜಿಲ್ಲೆಯ ಜನತೆಗೆ ಧನ್ಯತೆಯ ಕೃತಜ್ಞತೆ ಸಲ್ಲಿಸಿರುವ ಸುಮಲತಾ ಅಂಬರೀಷ್, ಜಿಲ್ಲೆಯ ಜನರ ಪರವಾಗಿ ಕೆಲಸ ಮಾಡುವುದಾಗಿ ಪ್ರಮಾಣ ಮಾಡಿದ್ದಾರೆ.

ಬುಧವಾರ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಆಯೋಜಿಸಿದ್ದ ಅಂಬರೀಷ್ ಹುಟ್ಟುಹಬ್ಬ ಹಾಗೂ ಕೃತಜ್ಞತಾ ಸಮಾವೇಶದಲ್ಲಿ ಕಿಕ್ಕಿರಿದು ನೆರೆದಿದ್ದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಸತ್‍ಗೆ ಮೊದಲೇ ಮಂಡ್ಯ ಜನರ ಮುಂದೆ ಪ್ರಮಾಣವಚನ ಸ್ವೀಕರಿಸಿದರು.

ತನ್ನ ಗೆಲುವು ಜಿಲ್ಲೆಯ ಸ್ವಾಭಿಮಾನಿ ಜನರ ಗೆಲುವು, ಎಲ್ಲಾ ಮಹಿಳೆಯರ ಗೆಲುವು, ಅಂಬರೀಷ್ ಗೆಲುವು, ರೈತಸಂಘ, ಬಿಜೆಪಿ, ಜೆಡಿಎಸ್, ದಸಂಸ, ಪ್ರಗತಿಪರ ಸಂಘಟನೆಗಳ ಗೆಲುವು. ಎಲ್ಲರ ಪ್ರೀತಿ, ಆಶೀರ್ವಾದ ಗೆಲುವು ತಂದುಕೊಟ್ಟಿದೆ ಎಂದು ಅವರು ಕೃತಜ್ಞತೆ ಅರ್ಪಿಸಿದರು.

ನಾನು ಸಂಭ್ರಮ ಆಚರಿಸಲು ಬಂದಿಲ್ಲ. ನನ್ನ ಮೇಲೆ ದೊಡ್ಡ ಜವಾಬ್ಧಾರಿ ಹೊರಿಸಿದ್ದೀರಿ. ಕಪ್ಪುಚುಕ್ಕೆ ಇಲ್ಲದ ಜೀವನ ಮಾಡಿದ್ದೇನೆ. ಅದರಂತೆ ಸಾರ್ವಜನಿಕವಾಗಿಯೂ ಕಪ್ಪುಚುಕ್ಕೆ ಇಲ್ಲದಂತೆ ನಡೆದುಕೊಳ್ಳುತ್ತೇನೆ ಎಂದು ಅವರು ಹೇಳಿದರು. ಜಿಲ್ಲೆ ಮಾತ್ರವಲ್ಲ, ಕಾವೇರಿಕೊಳ್ಳದ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದು ಮೊದಲ ಆದ್ಯತೆ. ಜತೆಗೆ ರೈತರ ಸಮಸ್ಯೆ, ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ ಎಂದು ಅವರು ಭರವಸೆ ಇತ್ತರು.

ರೈತಸಂಘ, ದಸಂಸ, ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನನ್ನು ಬೆಂಬಲಿಸಿದ್ದಾರೆ. ಹಾಗಾಗಿ ನಾನು ಸರ್ವಪಕ್ಷಗಳ ಜನಪ್ರತಿನಿಧಿ. ಯಾವುದೇ ಆರೋಪ, ಟೀಕೆ, ಊಹಾಪೋಹ ಮಾತುಗಳಿಗೆ ಕಿವಿಗೊಡಬೇಡಿ ಎಂದು ಅವರು ತಿಳಿಸಿದರು.

ಅಂಬರೀಷ್ ಹಾದಿಯಲ್ಲಿ ನಡೆಯುತ್ತೇನೆ: ಕಾವೇರಿ ನದಿ ನೀರಿನ ವಿಚಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಇಟ್ಟವರು ಅಂಬರೀಷ್. ಜಿಲ್ಲೆಯ ಜನರ ಸಮಸ್ಯೆಗೆ ಅವರ ಸದಾ ತುಡಿತವಿತ್ತು. ಅವರ ಆದರ್ಶ ನನಗೆ ಮಾದರಿಯಾಗಿದೆ. ಅವರ ಹಾದಿಯಲ್ಲೇ ನಡೆಯುತ್ತೇನೆ ಎಂದು ಸುಮಲತಾ ಘೋಷಿಸಿದರು.

ಚುನಾವಣೆ ಪ್ರಚಾರ ವೇಳೆ ಭರವಸೆ ನೀಡಲು ಆಗಲಿಲ್ಲ. ಆದರೆ, ಸಂಸದೆಯಾಗಿ ನನ್ನ ಪರಿಮಿತಿಯಲ್ಲಿ ಏನು ಮಾಡಬೇಕೋ ಮಾಡುತ್ತೇನೆ. ಅಂಬರೀಷ್ ಹೆಸರು ಮತ್ತು ನಿಮ್ಮ ಸ್ವಾಭಿಮಾನ ಉಳಿಸಿಕೊಳ್ಳುತ್ತೇನೆ ಎಂದು ಅವರು ಭರವಸೆ ನೀಡಿದರು. ಪ್ರಚಾರ ವೇಳೆ ವಿರೋಧಿ ಪಕ್ಷದವರು ಇನ್ನಿಲ್ಲದ ನಿಂದನೆ ಮಾಡಿದರು. ಅದೆಲ್ಲವನ್ನೂ ತಾಳ್ಮೆಯಿಂದ ಸಹಿಸಿದ್ದೇವೆ. ಅದೆಲ್ಲವನ್ನೂ ಅಲ್ಲಿಗೇ ಬಿಟ್ಟುಬಿಡಬೇಕು. ಜಿಲ್ಲೆಯ ಸಮಸ್ಯೆಗಳ ನಿವಾರಣೆ ಬಗ್ಗೆ ಚರ್ಚಿಸಲು ಕರೆಯಿರಿ, ಬರುತ್ತೇನೆ ಎಂದು ಜೆಡಿಎಸ್ ಮುಖಂಡರಿಗೆ ಅವರು ಮನವಿ ಮಾಡಿದರು.

ಪ್ರಚಾರದಿಂದ ಆರಂಭಿಸಿ, ಫಲಿತಾಂಶದವರೆಗೂ ಮಂಡ್ಯ ಕ್ಷೇತ್ರದ ಚುನಾವಣೆ ರಾಷ್ಟ್ರದ ಗಮನ ಸೆಳೆದು ಇತಿಹಾಸವನ್ನೇ ಸೃಷ್ಟಿಸಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ರೈತಸಂಘದ ಬಾವುಟಗಳು ಒಟ್ಟಿಗೆ ಹಾರಾಡಿದ್ದು ದೊಡ್ಡ ಇತಿಹಾಸ ಎಂದು ಅವರು ವಿಶ್ಲೇಷಿಸಿದರು.

52 ವರ್ಷಗಳ ನಂತರ ರಾಜ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದು, ರಾಜ್ಯದ ಪ್ರಥಮ ಪಕ್ಷೇತರ ಸಂಸದೆ ಆಯ್ಕೆ ಮಾಡಿದ್ದು, ಪ್ರಸಕ್ತ ಚುನಾವಣೆಯಲ್ಲಿ ದೇಶದ 272 ಪಕ್ಷೇತರ ಅಭ್ಯರ್ಥಿಗಳ ಪೈಕಿ ಓರ್ವಳೇ ಜಯಗಳಿಸಿದ್ದು, ಇವೆಲ್ಲವೂ ಮಂಡ್ಯ ಜನರು ನಿರ್ಮಿಸಿದ ಇತಿಹಾಸ ಎಂದು ಅವರು ಹೆಮ್ಮೆಪಟ್ಟರು.
30 ವರ್ಷಗಳ ದಾಂಪತ್ಯದಲ್ಲಿ ಅಂಬರೀಷ್ ಅವರ ಜತೆ ಉತ್ತಮ ಜೀವನ ಸಾಗಿಸಿದ್ದೇನೆ. ಇದೇ ಮೊದಲ ಬಾರಿಗೆ ಅವರ ಅನುಪಸ್ಥಿತಿಯಲ್ಲಿ ಅವರ ಹುಟ್ಟುಹಬ್ಬ ಆಚರಿಸುತ್ತಿರುವುದು ನೋವಾಗಿದೆ. ಇನ್ನು ಮುಂದೆ ಪ್ರತಿವರ್ಷ ಮಂಡ್ಯದಲ್ಲೇ ಅಂಬರೀಷ್ ಹುಟ್ಟುಹಬ್ಬ ನಡೆಯಲಿದೆ ಎಂದು ಅವರು ಭಾವುಕರಾದರು.

ಮಗನ ಸಿನಿಮಾ ನೋಡಲು ಅಂಬರೀಷ್ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅದು ಈಡೇರಲಿಲ್ಲ. ಇದೇ 31 ರಂದು ಮಗ ಅಭಿಷೇಕ್‍ನ ಅಮರ್ ಚಿತ್ರ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದು ವೈಯಕ್ತಿವಾಗಿ ಸುಮಲತಾ ಮನವಿ ಮಾಡಿದರು. ಒಟ್ಟಾರೆ, ಸ್ವಾಭಿಮಾನದ ಮಂಡ್ಯ ಜಿಲ್ಲೆ ಜನರಿಗೆ ಅಭಿಮಾನದ ಅಭಿನಂದನೆಗಳು ಅರ್ಪಿಸುತ್ತಿದ್ದೇನೆ. ಸಂಸತ್ತಿನಲ್ಲಿ ನಿಮ್ಮ ಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

ಚಿತ್ರನಟರಾದ ಯಶ್, ದರ್ಶನ್, ಅಭಿಷೇಕ್ ಅಂಬರೀಷ್, ದೊಡ್ಡಣ್ಣ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಮಾಜಿ ಶಾಸಕ ಎಚ್.ಬಿ.ರಾಮು. ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ರೈತಸಂಘದ ನಾಯಕಿ ಸುನೀತ ಪುಟ್ಟಣ್ಣಯ್ಯ, ಬಿಜೆಪಿ ಮುಖಂಡ ಇ.ಅಶ್ವತ್ಥನಾರಾಯಣ, ಕಾಂಗ್ರೆಸ್ ಮುಖಂಡರಾದ ಡಾ.ರವೀಂದ್ರ, ತ್ಯಾಗರಾಜ್, ಹನಕೆರೆ ಶಶಿಕುಮಾರ್, ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News