ಅಧಿಕಾರಿಗಳು, ಪೊಲೀಸರು, ಗ್ರಾಮಸ್ಥರಿಂದ ಕಿರುಕುಳ: ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದ ರೈತ ಕುಟುಂಬ

Update: 2019-05-29 17:32 GMT

ಮೈಸೂರು,ಮೇ.29: ನ್ಯಾಯಕ್ಕೆ ಹಂಬಲಿಸುವ ತಮ್ಮ ಮೇಲೆ ಅಧಿಕಾರಿಗಳ, ಪೊಲೀಸರ ಹಾಗೂ ಗ್ರಾಮಸ್ಥರ ಕಿರುಕುಳ ತಾಳದಾಗಿದೆ, ಅದಕ್ಕೆ ಅನ್ಯ ಮಾರ್ಗವಿಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ರೈತ ಕುಟುಂಬವೊಂದು ಬಹಿರಂಗವಾಗಿ ಘೋಷಿಸಿಕೊಂಡಿದೆ.

ನಗರದ ಪತ್ರಕರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಿರಿಯಾಪಟ್ಟಣದ ಕೆಬಸವನಹಳ್ಳಿಯ ನಾಗರಾಜೇಗೌಡ, ಪಿತ್ರಾರ್ಜಿತ ಅಸ್ತಿ ಸರ್ವೆ ನಂ 40/4 ರಲ್ಲಿ 2 ಎಕರೆ 30 ಗುಂಟೆ ಹಾಗೂ 1/11 1 ಎಕರೆ 32 ಗುಂಟೆ ಜಮೀನನಲ್ಲಿ ಸರ್ವೆ ಮಾಡಿದಾಗ ಸುಮಾರು 8 ಗುಂಟೆ ಜಮೀನನ್ನು ಗ್ರಾಮದ ಶಿವಣ್ಣೇಗೌಡ, ಕಾಂತರಾಜು, ಚಂದ್ರಶೇಖರ ಹಾಗೂ ಅಭಿ ಒತ್ತುವರಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕೆ ಒತ್ತಾಯಿಸಿದ್ದ ತಮ್ಮ ಮೇಲೆಯೇ ಬೆಟ್ಟದಪುರ ಪೊಲೀಸರು ಹಲವಾರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಹೇಳಿದರು.

ತಮ್ಮ ಜಮೀನನಲ್ಲಿಯೇ ಓಡಾಡಲು ದಾರಿಗಾಗಿ ಅವಕಾಶ ನೀಡಲಾಗಿದೆ, ಹೀಗಿದ್ದರೂ ಅವರು ದೌರ್ಜನ್ಯವೆಸಗಿ ಒತ್ತುವರಿ ಮಾಡಿದ್ದಾರೆ. ಈ ಬಗ್ಗೆ ಸಿಎಂ, ಜಿಲ್ಲಾಧಿಕಾರಿ, ತಹಶೀಲ್ದಾರ್ ಬಳಿ ಕಳೆದ ಸೆಪ್ಟೆಂಬರ್ ನಿಂದಲೇ ನ್ಯಾಯಕ್ಕಾಗಿ ಒತ್ತಾಯಿಸಲಾಗಿದೆ, ಹೀಗಿದ್ದರೂ ಸಮಸ್ಯೆ ಬಗೆಹರಿಯದೇ ಕುಟುಂಬವು ತೀವ್ರ ಒತ್ತಡಕ್ಕೊಳಗಾಗಿದೆ ಎಂದು ಆರೋಪಿಸಿದರು.

ಸಂಬಂಧಿಸಿದ ಪ್ರಕರಣವನ್ನು ಕೂಡಲೇ ಇತ್ಯರ್ಥಗೊಳಿಸಿ ತಮಗೆ ನ್ಯಾಯ ಒದಗಿಸಬೇಕು. ಇಲ್ಲವೇ ಈ ಹಿಂಸೆ ಸಹಿಸಲು ಸಾಧ್ಯವಿಲ್ಲದೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ತಮಗಿರುವ ದಾರಿಯೆಂದು ಅಲವತ್ತು ಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜೇಗೌಡ, ಕರುಣಾಕ್ಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News