ಚಿಕ್ಕಮಗಳೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಂತಿಯುತ: ಶೇ.74ರಷ್ಟು ಮತದಾನ

Update: 2019-05-29 17:50 GMT

ಚಿಕ್ಕಮಗಳೂರು, ಮೇ 29: ರಾಜ್ಯದ್ಯಂತ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ಭಾಗವಾಗಿ ಜಿಲ್ಲೆಯಲ್ಲಿ ಒಂದು ಪುರಸಭೆ ಹಾಗೂ ನಾಲ್ಕು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಶೇ.74ರಷ್ಟು ಮತದಾನವಾಗಿದೆ. 

ಜಿಲ್ಲೆಯು ಕಡೂರು, ಬೀರೂರು, ತರೀಕೆರೆ ಸೇರಿದಂತೆ ಮೂರು ಪುರಸಭೆಗಳನ್ನು ಹೊಂದಿದ್ದು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜ ಪುರ ಪಟ್ಟಣ ಪಂಚಾಯತ್ ಸೇರಿ ನಾಲ್ಕು ಪಂಚಾಯತ್‍ಗಳು ಹಾಗೂ ಚಿಕ್ಕಮಗಳೂರು ನಗರಸಭೆಯನ್ನು ಒಳಗೊಂಡಿದೆ. ಈ ಪೈಕಿ  ಬೀರೂರು, ತರೀಕೆರೆ ಹಾಗೂ ಚಿಕ್ಕಮಗಳೂರು ನಗರಸಭೆಯ ಮೀಸಲು ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಲಾಗಿದೆ.

ಜಿಲ್ಲೆಯಲ್ಲಿ ಕಡೂರು ಪುರಸಭೆ ಹಾಗೂ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜ ಪುರ ಪಟ್ಟಣ ಪಂಚಾಯತ್‍ಗಳಿಗೆ ಬುಧವಾರ ಚುನಾವಣೆ ನಡೆದಿದ್ದು, 1 ಪುರಸಭೆ ಹಾಗೂ ನಾಲ್ಕು ಪಟ್ಟಣ ಪಂಚಾಯತ್‍ಗಳ 67 ವಾರ್ಡ್‍ಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಒಟ್ಟು 214 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು ಈ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ.

ಬುಧವಾರ ಬೆಳಗ್ಗೆ ಈ ವಾರ್ಡ್‍ಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ 7ರಿಂದ ಸಂಜೆ 5ರ ವರೆಗೆ ನಡೆದ ಮತದಾನ ಪ್ರಕ್ರಿಯೆ ನಡೆದಿದ್ದು, ಮಹಿಳಾ ಹಾಗೂ ಪುರುಷ ಮತದಾರರು ಪ್ರತ್ಯೇಕ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಕಡೂರು ಪುರಸಭೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಮತ್ತು ಮೂಡಿಗೆರೆ ಪಟ್ಟಣ ಪಂಚಾಯತ್‍ಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಮತಯಂತ್ರಗಳನ್ನು ಬಳಕೆ ಮಾಡಲಾಗಿದ್ದು, ಇವಿಎಂ ಸಂಬಂಧ ಯಾವುದೇ ಗೊಂದಲ, ದೂರುಗಳು ಕೇಳಿಬಂದ ಬಗ್ಗೆ ವರದಿಯಾಗಿಲ್ಲ.

ಜಿಲ್ಲೆಯ ಕಡೂರು ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 27,517 ಮತದಾರರಿದ್ದು, ಸಂಜೆ 5ಗಂಟೆ ವೇಳೆಗೆ 19,656 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಇಲ್ಲಿ ಅಂತಿಮವಾಗಿ ಶೇ.71.29ರಷ್ಟು ಮತದಾನವಾಗಿದೆ. ಶೃಂಗೇರಿ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಪ್ಪ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 3,854 ಮತದಾರರಿದ್ದು, 2,857 ಮತದಾರರು ಮತ ಚಲಾಯಿಸುವುದರೊಂದಿಗೆ ಶೇ.74.13ರಷ್ಟು ಮತದಾನವಾಗಿದೆ. ಇದೇ ಕ್ಷೇತ್ರ ವ್ಯಾಪ್ತಿಯ ಶೃಂಗೇರಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2,858 ಒಟ್ಟು ಮತದಾರರಿದ್ದು, 2,332 ಮತದಾರರು ಮತ ಚಲಾವಣೆಗೊಳ್ಳುವುದರೊಂದಿಗೆ ಶೇ.81.60 ರಷ್ಟು ಮತದಾನವಾಗಿದ್ದರೆ, ನರಸಿಂಹರಾಜಪುರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 5,561 ಮತದಾರರಿದ್ದು, 4,168 ಮತ ಚಲಾವಣೆಗೊಂಡಿದ್ದು, ಶೇ.74.95ರಷ್ಟು ಮತದಾನವಾಗಿದೆ. ಇನ್ನು ಮೂಡಿಗೆರೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 7,678 ಮತದಾರರಿದ್ದು, 5,328 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.69.39ರಷ್ಟು ಮತದಾನವಾಗಿದೆ.  

ಒಟ್ಟಾರೆ ಜಿಲ್ಲೆಯಲ್ಲಿ 47,468 ಮತದಾರರ ಪೈಕಿ 17,188 ಮತದಾರರು ಮತಚಲಾಯಿಸಿದ್ದು, ಜಿಲ್ಲೆಯ ಕಡೂರು ಪುರಸಭೆ ಹಾಗೂ ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಮೂಡಿಗೆರೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬುಧವಾರ ಶಾಂತಿಯುತ ಮತದಾನ ನಡೆದಿದ್ದು ಶೇ.72.26ರಷ್ಟು ಮತದಾನವಾಗಿದೆ. ಜಿಲ್ಲೆಯ ಒಟ್ಟು 67 ವಾರ್ಡ್‍ಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಒಟ್ಟು 214 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಈ ಅಭ್ಯರ್ಥಿಗಳ ಭವಿಷ್ಯ ಮೇ 31ರಂದು ಶುಕ್ರವಾರ ಹೊರಬೀಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News