×
Ad

ಆಹಾರ ನಿರೀಕ್ಷಕರ ಕೊಲೆಗೆ ಯತ್ನ: ಮೂವರು ಆರೋಪಿಗಳ ಬಂಧನ

Update: 2019-05-29 23:48 IST

ದಾವಣಗೆರೆ, ಮೇ 29: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ, ಸಾಗಾಟದ ಬಗ್ಗೆ ಮಾಹಿತಿ ಸಂಗ್ರಹಿಸಲು ಬಂದಿದ್ದ ಆಹಾರ ನಿರೀಕ್ಷಕರ ಕೊಲೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಇಲ್ಲಿನ ಆರ್‌ಎಂಸಿ ಯಾರ್ಡ್ ಪೊಲೀಸರು ಬಂಧಿಸಿದ್ದಾರೆ.

ನಗರದ ಬಿಟಿ ಪೆಟ್ರೋಲ್ ಬಂಕ್‌ನ ವ್ಯವಸ್ಥಾಪಕ ಅಬ್ದುಲ್ ರೆಹಮಾನ್(32), ಆಟೊ ಚಾಲಕ ಮುಹಮ್ಮದ್ ಯೂನಸ್(24) ಹಾಗೂ ಕೂಲಿ ಕೆಲಸಗಾರ ಜಾಫರ್(20) ವರ್ಷ ಬಂಧಿತರು ಎನ್ನಲಾಗಿದೆ.

ಚಿತ್ರದುರ್ಗದ ತಾಲೂಕು ಆಹಾರ ನಿರೀಕ್ಷಕ ವಿ.ತಿಪ್ಪೇಶಪ್ಪರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಆರೋಪಿಗಳನ್ನು ಬೈಕ್‌ಗಳು, ಮಾರ ಕಾಸ್ತ್ರಗಳ ಸಮೇತ ಬಂಧಿಸಲಾಗಿದೆ. ಮೇ 24ರಂದು ರಾತ್ರಿ ಸುಮಾರು 9:45ರ ವೇಳೆ ಆಹಾರ ನಿರೀಕ್ಷಕ ತಿಪ್ಪೇಶಪ್ಪ ಮೊಬೈಲ್‌ಗೆ ದಾವಣಗೆರೆಯಲ್ಲಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮತ್ತು ಸಾಗಾಟ ಮಾಡುವ ಲಾರಿ ಬಗ್ಗೆ ಮಾಹಿತಿ ನೀಡುವುದಾಗಿ, ದಾವಣಗೆರೆ ನಿವಾಸಿಯೊಬ್ಬನಿಂದ ಕರೆ ಹೋಗುತ್ತದೆ. ಕರೆಯ ಮೇರೆಗೆ ರಾತ್ರಿ 8:50ಕ್ಕೆ ತಿಪ್ಪೇಶಪ್ಪ ಚಿತ್ರದುರ್ಗದಿಂದ ದಾವಣಗೆರೆಗೆ ಬಂದು, ತಮಗೆ ಕರೆ ಮಾಡಿದ್ದ ವ್ಯಕ್ತಿಗೆ ಸಂಪರ್ಕಿಸುತ್ತಾರೆ.

ನಂತರ ಕರೆ ಮಾಡಿದ್ದ ವ್ಯಕ್ತಿ ಆನಂದ್ ರೆಸಿಡೆನ್ಸಿ ಬಳಿ ಬಂದು ತಿಪ್ಪೇಸ್ವಾಮಿಗೆ ಆವರಗೆರೆ ಹೊರ ವಲಯದ ಉತ್ತಮಚಂದ್ ಬಡಾವಣೆಗೆ ಕರೆದೊಯ್ಯುತ್ತಾರೆ. ತಿಪ್ಪೇಸ್ವಾಮಿ ಕುಳಿತಿದ್ದ ಬೈಕ್ ಸ್ಕಿಡ್ ಮಾಡಿದಂತಾಗಿದ್ದರಿಂದ ಬೈಕ್ ಚಾಲನೆ ಮಾಡುತ್ತಿದ್ದ ಅಬು ಅಲಿಯಾಸ್ ಅಬ್ದುಲ್ ರೆಹಮಾನ್ ಬೀಳುತ್ತಾರೆ. ಅಷ್ಟರಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರು ಯುವಕರೂ ತಮ್ಮ ಬಳಿ ಇದ್ದ ಮಾರಕಾಸ್ತ್ರಗಳಿಂದ ತಿಪ್ಪೇಶಪ್ಪನ ಮೇಲೆ ದಾಳಿಗೆ ಮುಂದಾಗುತ್ತಾರೆ. ಮಾಹಿತಿ ನೀಡುವುದಾಗಿ ಕರೆಸಿದವನೇ ತನ್ನ ಹತ್ಯೆಗೆ ಇತರೆ ಇಬ್ಬರೊಂದಿಗೆ ಸೇರಿ ಸಂಚು ನಡೆಸಿದ್ದನ್ನು ಗ್ರಹಿಸಿದ ಆಹಾರ ನಿರೀಕ್ಷಕ ತಿಪ್ಪೇಶಪ್ಪ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಮನೆಗಳಲ್ಲಿದ್ದ ಜನರು ಹೊರಗೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗುತ್ತಾರೆ. ನಂತರ ತಿಪ್ಪೇಸ್ವಾಮಿ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ತೆರಳಿ ತಮ್ಮ ಹತ್ಯೆಗೆ ಯತ್ನಿಸಿದವರ ವಿರುದ್ಧ ದೂರು ನೀಡಿ, ಮೊಬೈಲ್ ನಂಬರ್ ಪೊಲೀಸ್ ಅಧಿಕಾರಿಗಳಿಗೆ ನೀಡಿದ್ದಾರೆ. 

ಆರೋಪಿಗಳ ಬಂಧನಕ್ಕಾಗಿ ಎಸ್ಪಿ ಆರ್.ಚೇತನ್, ಎಎಸ್ಪಿ ಟಿ.ಜೆ.ಉದೇಶ್, ಡಿಎಸ್ಪಿ ಎಸ್.ಎನ್. ನಾಗರಾಜ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಶ್ರೀನಿವಾಸ ರಾವ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಆರ್‌ಎಂಸಿ ಠಾಣೆ ಎಸ್ಸೈ ಡಿ.ಶಿವಕುಮಾರ ಮತ್ತು ಸಿಬ್ಬಂದಿಯಾದ ಆಂಜನೇಯ, ಶಿವಕುಮಾರ, ಪ್ರಸನ್ನಕುಮಾರ್, ಗುಗ್ಗರಿ ಲೋಕೇಶ, ವೀರೇಶ ಹಾಗೂ ತಂಡವು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News