ಚಿಕ್ಕಮಗಳೂರು: ಆಝಾದ್ ಪಾರ್ಕ್ ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ

Update: 2019-05-29 18:22 GMT

ಚಿಕ್ಕಮಗಳೂರು, ಮೇ 29: ನಗರದ ಆಜಾದ್ ಪಾರ್ಕ್ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲಾ ಆರಂಭೋತ್ಸವವನ್ನು ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.

ಶೈಕ್ಷಣಿಕ ವರ್ಷಾರಂಭದ ಪ್ರಯುಕ್ತ ನಸುಕಿನಲ್ಲೇ ಶಾಲೆಗೆ ಆಗಮಿಸಿದ್ದ ಶಿಕ್ಷಕರು ರಂಗವಲ್ಲಿ ಹಾಕಿ, ತಳಿರು ತೋರಣಗಳನ್ನು ಕಟ್ಟಿ ಶಾಲೆಯನ್ನು ನವ ವಧುವಿನಂತೆ ಸಿಂಗರಿಸಿದ್ದರು. ಶಾಲೆಯ ಆರಂಭದ ಸಮಯವಾಗುತ್ತಿದ್ದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಸರಸ್ವತಿ ಪೂಜೆ ನೆರವೇರಿಸಿದರು, ನಂತರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಠಿ ಮಾಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ, ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಇಲಾಖೆಯಿಂದ ಈಗಾಗಲೇ ತಾಲ್ಲೂಕಿನಾದ್ಯಂತ ಒಂದು ಸುತ್ತು ವಿಶೇಷ ದಾಖಲಾತಿ ಆಂದೋಲನ ನಡೆಸಲಾಗಿದ್ದು, ಇನ್ನೂ ಒಂದು ಬಾರಿ ನಡೆಸಲಾಗುವುದು. ಸಾಮಾನ್ಯ ದಾಖಲಾತಿ ಆಂದೋಲನ ಜೂ.1ರಿಂದ 30ರ ವರೆಗೆ ನಡೆಸಲಾಗುವುದು ಎಂದ ಅವರು, ನಗರದ ಬಸವನಹಳ್ಳಿ, ಗೃಹಮಂಡಳಿ ಬಡಾವಣೆ ಹಾಗೂ ತಾಲೂಕಿನ ಕಳಸಾಪುರ, ಮಾಚಗೊಂಡನಹಳ್ಳಿ ಮತ್ತು ಮಲ್ಲಂದೂರಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಸಾಲಿನಿಂದ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ಬಿ.ಆರ್.ಗೀತಾ ಮಾತನಾಡಿ, ಶಾಲೆಗೆ ಬುಧವಾರ ಓರ್ವ ವಿದ್ಯಾರ್ಥಿ ಪ್ರವೇಶ ಪಡೆದುಕೊಂಡಿದ್ದಾನೆ. 13 ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ 63 ವಿದ್ಯಾರ್ಥಿಗಳ ಸಂಖ್ಯೆ ಇದ್ದು, ಈ ಬಾರಿ 80 ವಿದ್ಯಾರ್ಥಿಗಳಿಗೆ ಏರಿಕೆಯಾಗಲಿದೆ. ಬೆಳಗ್ಗೆ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ್ದೇವೆ. ಶಾರದ ಪೂಜೆ ಮಾಡಿದ್ದೇವೆ. ಮಧ್ಯಾಹ್ನ ಊಟಕ್ಕೆ ವಿಶೇಷವಾಗಿ ಪಾಯಸ, ಪಲಾವ್ ಮಾಡಲಾಗಿದೆ. ಶೇ.70 ಪಠ್ಯಪುಸ್ತಕ ಬಂದಿದ್ದು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ವಿತರಣೆ ಮಾಡಿದ್ದೇವೆ. ಎ.27ರಿಂದ ಮೇ 27ರ ವರೆಗೆ ಶಾಲಾ ಆವರಣದಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು ಎಂದರು. 

ಇದೇ ವೇಳೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮತ್ತು ಸಿಹಿ ವಿತರಿಸಲಾಯಿತು. ಅಕ್ಷರ ದಾಸೋಹ ಸಹನಿರ್ದೇಶಕ ಉದಯಕುಮಾರ್, ಸಿಆರ್‍ಪಿ ಪ್ರದೀಪ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಶ್ರೀಧರ್, ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ, ಶಿಕ್ಷಕರಾದ ಎಸ್.ಈ.ಲೋಕೇಶ್ವರಾಚಾರ್, ನಾಗವೇಣಿ, ಜಯಂತಿ, ಸಾವಿತ್ರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News