ವರ್ಷದೊಳಗೆ ತುಮಕೂರಿನಲ್ಲಿ ಮಾಲ್ ನಿರ್ಮಾಣ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2019-05-30 12:46 GMT

ಬೆಂಗಳೂರು, ಮೇ 30: ತುಮಕೂರಿನ ಸ್ಮಾರ್ಟ್‌ಸಿಟಿ ಯೋಜನೆಯಡಿ ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳದಲ್ಲಿ ಮಲ್ಟಿ ಯುಟಿಲಿಟಿ ಮಾಲ್ ವಿಥ್ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಒಂದು ವರ್ಷದೊಳಗೆ ನಿರ್ಮಿಸಬೇಕೆಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಸೂಚಿಸಿದ್ದಾರೆ.

ಗುರುವಾರ ವಿಧಾನಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಲ್ಟಿಯುಟಿಲಿಟಿ ಮಾಲ್ ನಿರ್ಮಾಣ ಸಂಬಂಧ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಸಿದ್ದಿವಿನಾಯಕ ಮಾರುಕಟ್ಟೆ ಸ್ಥಳ ಪ್ರಸ್ತುತ ಎಪಿಎಂಸಿ ಸುಪರ್ದಿಗೆ ಸೇರಿದೆ. ಆದರೂ ಈ ಸ್ಥಳ ತಕರಾರಿನಲ್ಲಿದ್ದು, ಅಗತ್ಯಬಿದ್ದರೆ ಸ್ಥಳದ ವಿಚಾರವನ್ನು ಸಂಪುಟದಲ್ಲಿ ಮುಂದಿಟ್ಟು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ ಮಾಲ್ ಮೂರು ಅಂತಸ್ತಿನ ಕಟ್ಟಡವಾಗಿದೆ. ತಳಮಹಡಿಯಲ್ಲಿ 140 ಕಾರ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು. ಈ ಮಾಲ್ ಅನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ತುಮಕೂರು ಸ್ಮಾರ್ಟ್‌ಸಿಟಿಯಡಿ ನಿರ್ಮಾಣವಾಗುತ್ತಿರುವ ಪ್ರಾಜೆಕ್ಟ್‌ಗಳು ಶೀಘ್ರವೇ ಪೂರ್ಣಗೊಳಿಸಿ ಎಂದೂ ನಿರ್ದೇಶನ ನೀಡಿದರು.

ಮುಂದಿನ ಆಗಸ್ಟ್ 15ರೊಳಗಾಗಿ ಸ್ಮಾರ್ಟ್‌ರಸ್ತೆಗಳು ಸಂಪೂರ್ಣ ಸಿದ್ಧವಾಗಬೇಕು. ಸ್ಮಾರ್ಟ್‌ಸಿಟಿ ಯೋಜನೆ ಘೋಷಣೆಯಾಗಿದ್ದರೂ ತುಮಕೂರಿನಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಎಲ್ಲ ಯೋಜನೆಗಳು ಪೂರ್ಣಗೊಳಿಸಲು ವಿಳಂಬ ಸರಿಯಲ್ಲ ಶೀಘ್ರವೇ ಕೈಗೊಂಡ ಯೋಜನೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಭೆಯಲ್ಲಿ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನ ಅಧ್ಯಕ್ಷೆ ಶಾಲಿನಿ ರಜನೀಶ್, ತುಮಕೂರು ಜಿಲ್ಲಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News