ಆರೆಸ್ಸೆಸ್ ನಿಷ್ಠ ಪ್ರಹ್ಲಾದ್ ಜೋಶಿಗೆ ಒಲಿದ ಕೇಂದ್ರ ಸಚಿವ ಸ್ಥಾನ

Update: 2019-05-30 14:49 GMT

ಬೆಂಗಳೂರು, ಮೇ 30: ಧಾರವಾಡ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಉತ್ತರ ಕರ್ನಾಟಕ ಭಾಗದ ಹಿರಿಯ ಮುಖಂಡ, ಉತ್ತಮ ಸಂಸದೀಯ ಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಹ್ಲಾದ ಜೋಶಿ ಅವರಿಗೆ ಪ್ರಧಾನಿ ಮೋದಿ ನೇತೃತ್ವದ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸಮಿತಿ ಅಧ್ಯಕ್ಷರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಜೋಶಿ ಅವರು, ಈ ಹಿಂದೆ ಹಂಗಾಮಿ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಮೇಲೆ ಹಿಡಿತ ಸಾಧಿಸಿರುವ ಶ್ರೀಯುತರು, ಬಿಜೆಪಿ ರಾಜ್ಯಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣ ಮೇಲ್ದರ್ಜೆ, ಹುಬ್ಬಳ್ಳಿ ಸ್ಮಾರ್ಟ್‌ಸಿಟಿ, ಧಾರವಾಡಕ್ಕೆ ಐಐಟಿ ಸೇರಿ ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಹಿರಿಮೆ ಇವರದ್ದು. ಮೋದಿ ಸಂಪುಟದಲ್ಲಿ ಪ್ರಭಾವಿ ನಾಯಕರಾಗಿದ್ದ ಅನಂತಕುಮಾರ್ ನಿಧನರಾದ ಬಳಿಕ ದಿಲ್ಲಿ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಾಮರ್ಥ್ಯ ಜೋಶಿ ಅವರಿಗಿದೆ ಎಂಬ ಅಭಿಪ್ರಾಯವಿದೆ.

ವೆಂಕಟೇಶ್ ಜೋಶಿ ಮತ್ತು ಮಾಲತಿಬಾಯಿ ಅವರ ಪುತ್ರನಾಗಿ 1962ರಲ್ಲಿ ಜನಿಸಿದ ಜೋಶಿ ಅವರ ತಂದೆ ರೈಲ್ವೆ ನೌಕರರಾಗಿದ್ದರು. ಹುಬ್ಬಳ್ಳಿಯಲ್ಲೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪೂರೈಸಿ, ಇಲ್ಲಿನ ಕಾಡಸಿದ್ದೇಶ್ವರ ಕಲಾ ವಿದ್ಯಾಲಯದಲ್ಲಿ ಬಿ.ಎ. ಪದವಿಯನ್ನು ಪಡೆದುಕೊಂಡಿದ್ದಾರೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಜೋಶಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದಲ್ಲಿ ಆರಂಭದಿಂದಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಸಂಘದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಹುಬ್ಬಳ್ಳಿ ಈದ್ಗಾ ಮೈದಾನ ಉಳಿಸಿ ಹೋರಾಟದಲ್ಲಿ ಜೋಶಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈದ್ಗಾ ಮೈದಾನ ವಿವಾದದ ಸಂದರ್ಭದಲ್ಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News