ದಕ್ಷ ಮಹಿಳೆ ನಿರ್ಮಲಾ ಸೀತಾರಾಮನ್‌ಗೆ ಸಚಿವೆ ಸ್ಥಾನ

Update: 2019-05-30 14:57 GMT

ಬೆಂಗಳೂರು, ಮೇ 30: ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಪ್ರಸ್ತುತ ರಕ್ಷಣಾ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ತಮಿಳುನಾಡು ಮೂಲದ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕೇಂದ್ರ ಸಚಿವೆ ಭಾಗ್ಯ ಲಭಿಸಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಸೇವೆ ಸಲ್ಲಿಸಿದ ಅನುಭವವಿರುವ ನಿರ್ಮಲಾ, ಈ ಹಿಂದೆ ಕೇಂದ್ರದಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆಂಧ್ರದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕರ್ನಾಟಕ ಪ್ರತಿನಿಧಿಸುತ್ತಿರುವ ನಿರ್ಮಲಾ ಸೀತಾರಾಮನ್ ತಮಿಳುನಾಡಿನ ಮದುರೈನ ತಮಿಳು ಐಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು.

ನಿರ್ಮಲಾ ಅವರು ತಿರುಚಿರಾಪಲ್ಲಿಯಲ್ಲಿ ಬಿ.ಎ. ಪದವಿ ಪಡೆದಿದ್ದು, ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರು ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ.ಪದವಿಯನ್ನು ಪಡೆದರು. ಸ್ನಾತಕೋತ್ತರ ಪದವಿ ಸಮಯದಲ್ಲಿ ತಮ್ಮ ಸಹಪಾಠಿ ಪರಕಾಲ ಪ್ರಭಾಕರ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

2003ರಿಂದ 2005ರ ವರೆಗೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು. 2008ರಲ್ಲಿ ಬಿಜೆಪಿ ಸೇರಿದರು. ತಮ್ಮ ವಾಕ್ಚಾತುರ್ಯದಿಂದ ಅಲ್ಪಕಾಲದಲ್ಲಿಯೇ ಪಕ್ಷದ ವಕ್ತಾರೆಯಾಗಿ ನೇಮಕಗೊಂಡರು. ಪಕ್ಷದ ಉನ್ನತ ಹುದ್ದೆ ಪಡೆದ ಮಹಿಳೆ ಎಂಬುದು ಇವರ ಹೆಗ್ಗಳಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News