ಉತ್ತರ ಕರ್ನಾಟಕದ ಸುರೇಶ್ ಅಂಗಡಿಗೆ ದಕ್ಕಿತು ಸಚಿವ ಸ್ಥಾನ

Update: 2019-05-30 15:18 GMT

ಬೆಂಗಳೂರು, ಮೇ 30: ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಬೆಳಗಾವಿ ಲೋಕಸಭಾ ಕ್ಷೇತ್ರದ ಸುರೇಶ್ ಅಂಗಡಿ ಅವರು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಸಚಿವ ಸ್ಥಾನವನ್ನು ದಕ್ಕಿಸಿಕೊಂಡಿದ್ದಾರೆ.

ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಚನ್ನಬಸಪ್ಪ ಹಾಗೂ ಸೋಮವ್ವ ದಂಪತಿ ಪುತ್ರನಾಗಿ 1955ರ ಜೂನ್ 1ರಂದು ಜನಿಸಿದ ಅಂಗಡಿ ಅವರು, ಬೆಳಗಾವಿಯ ಎಸ್‌ಎಸ್‌ಎಸ್ ಸಮಿತಿ ಕಾಲೇಜಿನಲ್ಲಿ ಬಿ.ಕಾಂ ಪದವಿ, ರಾಜಾ ಲಖಮಗೌಡ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಅಂಗಡಿ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಿಮೆಂಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಜಿಲ್ಲಾ ಮಟ್ಟದಲ್ಲಿ ಬಿಜೆಪಿ ಕಟ್ಟುವಲ್ಲಿ ಸಾಕಷ್ಟು ಶ್ರಮಿಸಿದರು. 1996ರಲ್ಲಿ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ನೇಮಕವಾಗಿ ಮೂರು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು.

2001ರಲ್ಲಿ ಬೆಳಗಾವಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ. 2004ರಲ್ಲಿ ಮೊಟ್ಟ ಮೊದಲ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ,ಆಯ್ಕೆಯಾದರು. ಆ ಬಳಿಕ 2009, 2014 ಹಾಗೂ 2019ರಲ್ಲಿ ನಿರಂತರ ಜಯ ದಾಖಲಿಸಿದರು.

ಪತ್ನಿ ಮಂಗಳಾ, ಸ್ಪೂರ್ತಿ ಹಾಗೂ ಶ್ರದ್ಧಾ ಇಬ್ಬರು ಪುತ್ರಿಯರು ಇದ್ದಾರೆ. ರಾಜ್ಯದ ಅತ್ಯಂತ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಸೇರಿದ ಸುರೇಶ್ ಅಂಗಡಿ ಅವರು ಮೃದುಭಾಷಿ. ಆದರೂ, ಸಂಘಟನಾ ಚತುರ. ಬೆಳಗಾವಿ ಭಾಗದಲ್ಲಿ ಬಿಜೆಪಿ ಬೆಳವಣಿಗೆಗೆ ಇವರ ಕೊಡುಗೆ ಹೆಚ್ಚಿದೆ ಎಂಬುದು ಬಿಜೆಪಿ ಮುಖಂಡರ ಅಭಿಮತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News