ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: ನಾಳೆ ಮತ ಎಣಿಕೆ
ಬೆಂಗಳೂರು, ಮೇ 30: ರಾಜ್ಯದ 61 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಹಾಗೂ ಉಪ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ನಾಳೆ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.
ರಾಜ್ಯದಲ್ಲಿ ಎರಡನೆ ಹಂತದಲ್ಲಿ 30 ಸ್ಥಾನಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು, ಉಳಿದ 1,296 ಸ್ಥಳೀಯ ಸಂಸ್ಥೆ ಸ್ಥಾನಗಳಿಗೆ ಚುನಾವಣೆ ನಡೆದಿದೆ. 1,615 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಶೇ.72.09 ರಷ್ಟು ಮತದಾನವಾಗಿದೆ. ನಾಳೆ ಮತ ಎಣಿಕೆ ನಡೆಯಲಿದ್ದು, 4,360 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ನಿನ್ನೆ ನಡೆದ ಉಪಚುನಾವಣೆಯಲ್ಲಿ ಬಿಬಿಎಂಪಿಯ ಎರಡು ಪಾಲಿಕೆ ಸ್ಥಾನಗಳಾದ ಕಾವೇರಿಪುರದಲ್ಲಿ ಶೇ.39.54 ಸಗಾಯಪುರದಲ್ಲಿ ಶೇ.44.83, ಹೆಬ್ಬಗೋಡಿ ನಗರಸಭೆ ವಾರ್ಡ್‌ನಲ್ಲಿ ಶೇ.40.07, ತುಮಕೂರು ಪಾಲಿಕೆಯ ವಾರ್ಡ್ 22 ರಲ್ಲಿ ಶೇ.57.06, ಸದಲಗಾ ಪುರಸಭೆ ಶೇ.89.99, ಮುಗಳಖೋಡ ಪುರಸಭೆ ಶೇ.93.99ರಷ್ಟು ಮತದಾನವಾಗಿದೆ.
ತಾಲೂಕು ಪಂಚಾಯತ್‌ಗಳಿಗೆ ನಡೆದ ಉಪಚುನಾವಣೆಯಲ್ಲಿ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಕ್ಷೇತ್ರದಲ್ಲಿ ಶೇ.57.68, ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಕ್ಷೇತ್ರದಲ್ಲಿ ಶೇ.68.17, ಸವಣೂರು ತಾಲೂಕಿನ ಯಲವಿಗಿ ಕ್ಷೇತ್ರದಲ್ಲಿ ಶೇ.55.43, ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್.ಎಸ್‌ನಲ್ಲಿ ಶೇ.64.58, ಬೀದರ್ ತಾಲೂಕಿನ ಮರಕುಂದಾದಲ್ಲಿ ಶೇ.52.42, ಸಿಂಧನೂರು ತಾಲೂಕಿನ ಧಡೇಸೂಗೂರುನಲ್ಲಿ ಶೇ.64.07, ಉದ್ಬಾಳ(ಯು)ನಲ್ಲಿ ಶೇ.56.58, ಶೋರಾಪುರ ತಾಲೂಕಿನ ಹೆಬ್ಬಾಳ(ಬಿ)ನಲ್ಲಿ ಶೇ.49.03 ಹಾಗೂ ಗೆದ್ದಲಮರಿ ಕ್ಷೇತ್ರದಲ್ಲಿ ಶೇ.55.55 ಮತದಾನವಾಗಿದೆ.
ಇನ್ನುಳಿದಂತೆ ಮೇ 29 ರಂದು ರಾಜ್ಯದ 30 ಜಿಲ್ಲೆಗಳ 191 ಗ್ರಾಮ ಪಂಚಾಯತ್ ಗಳ 201 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, 118 ಸ್ಥಾನಗಳಿಗೆ ಅವಿರೋಧ ಆಯ್ಕೆಯಾದ ಹಿನ್ನೆಲೆಯಲ್ಲಿ 76 ಸ್ಥಾನಗಳಿಗೆ ಉಪ ಚುನಾವಣೆ ನಡೆದಿದ್ದು, 297 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಜೂ.1 ಕ್ಕೆ ಚುನಾವಣೆ
ಮೇ 29 ಕ್ಕೆ ನಡೆಯಬೇಕಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪುರಸಭೆ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ಪಂಚಾಯತಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಿದ ಪರಿಣಾಮ ಜೂ.1 ಕ್ಕೆ ಚುನಾವಣೆ ನಡೆಯಲಿದೆ. ನಾಳೆ ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಜೂ.3 ರಂದು ಮತ ಎಣಿಕೆ ನಡೆಯಲಿದೆ.