'ಕೇಸರಿ ಫೈರ್ ಬ್ರ್ಯಾಂಡ್' ಹೆಗಡೆಗೆ ಇಲ್ಲ ಮೋದಿ ಸಂಪುಟದ ಭಾಗ್ಯ !

Update: 2019-05-30 16:56 GMT

ಹೊಸದಿಲ್ಲಿ, ಮೇ 30: ನರೇಂದ್ರ ಮೋದಿ ಅವರ ಮೊದಲ ಅವಧಿಯ ಸರಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆ ಈ ಬಾರಿ ಸಚಿವ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ರಾಜ್ಯದಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಅನಂತಕುಮಾರ್ ಹೆಗಡೆ, 1996ರಲ್ಲಿ ಮೊದಲ ಬಾರಿಗೆ ಕೆನರಾ ಲೋಕಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ ಲೋಕಸಭೆ ಪ್ರವೇಶಿಸಿದ್ದರು. ಕಳೆದ ಬಾರಿ ಮೋದಿ ಸಂಪುಟದಲ್ಲಿ ಕೌಶಲ್ಯಾಭಿವೃದ್ಧಿ ಸಚಿವರಾಗಿದ್ದ ಹೆಗಡೆ ಈ ಬಾರಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದ ಅನಂತಕುಮಾರ್, ಈ ಬಾರಿಯೂ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು.

ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಅನಂತಕುಮಾರ್ ಹೆಗಡೆ, ನಾವು ಅಧಿಕಾರಕ್ಕೆ ಬಂದದ್ದೇ ಸಂವಿಧಾನ ಬದಲಾಯಿಸಲು ಎಂದು ಹೇಳಿ ವಿವಾದದ ಕಿಡಿ ಹಚ್ಚಿದ್ದರು. ಅವಹೇಳನಕಾರಿ, ಕೀಳುಮಟ್ಟದ ಹೇಳಿಕೆಗಳಿಂದಲೇ ಪ್ರಚಾರದಲ್ಲಿದ್ದ ಹೆಗಡೆ, ಹಿಂದುತ್ವದ ಫೈರ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದಲ್ಲದೇ ಮುಸ್ಲಿಮರ ವಿರುದ್ಧ ಸದಾ ಕಿಡಿಕಾರುತ್ತಿದ್ದರು. ಇತ್ತೀಚೆಗೆ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ಬೆಂಬಲಿಸಿ ಟ್ವಿಟ್ ಮಾಡಿ ಪಕ್ಷದ ಮುಖಂಡರ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಮೋದಿ ನೂತನ ಸಂಪುಟದಲ್ಲಿ ಹೆಗಡೆಗೆ ಸಚಿವ ಸ್ಥಾನ ತಪ್ಪಿದ್ದು, ವಿವಾದಾತ್ಮಕ ಹೇಳಿಕೆಗಳೇ ಅವರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News