ಡಾ.ಜಿ.ಪರಮೇಶ್ವರ್ ವಿರುದ್ಧ ಜಾರಿಯಾಗಿದ್ದ ಸಮನ್ಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ

Update: 2019-05-30 17:39 GMT

ಬೆಂಗಳೂರು, ಮೇ 30: ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಸಂಬಂಧ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಜನಪ್ರತಿನಿಧಿಗಳ ಕೋರ್ಟ್ ಜಾರಿಗೊಳಿಸಿದ್ದ ಸಮನ್ಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಕುರಿತು ವಿಚಾರಣಾ ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿ ಪರಮೇಶ್ವರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಜನಪ್ರತಿನಿಧಿಗಳ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 4ಕ್ಕೆ ಮುಂದೂಡಿತು. ಪ್ರತಿವಾದಿಗಳಾದ ಸಾವಳಗಿ ಪೊಲೀಸ್ ಠಾಣೆ ಹಾಗೂ ಚುನಾವಣಾ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿದೆ.

ಪ್ರಕರಣವೇನು: ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ ಜಂಬಗಿ-ಸಾವಳಗಿ ಮಾರ್ಗದ ರಸ್ತೆಯನ್ನು ಮೂರು ತಿಂಗಳ ಒಳಗಾಗಿ ದುರಸ್ತಿ ಮಾಡಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪರಮೇಶ್ವರ್ ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಭರವಸೆ ನೀಡುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಚುನಾವಣಾಧಿಕಾರಿ, ಪರಮೇಶ್ವರ್ ವಿರುದ್ಧ 2018ರ ಅಕ್ಟೋಬರ್ 24ರಂದು ದೂರು ದಾಖಲಿಸಿದ್ದರು. ಇದರನ್ವಯ ಪ್ರಕರಣ ಸಾವಳಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯದಲ್ಲಿ ಇದೇ 31ರಂದು ವಿಚಾರಣೆಗೆ ನಿಗದಿಯಾಗಿದೆ. ಈ ವಿಚಾರಣೆಗೆ ಪರಮೇಶ್ವರ್ ಹಾಜರಾಗಬೇಕಿತ್ತು. ಪರಮೇಶ್ವರ್ ಪರ ಸಂದೀಪ್ ಪಾಟೀಲ್ ವಕಾಲತ್ತು ವಹಿಸಿದ್ದರು ಮತ್ತು ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News