ಜಿ.ಎ.ಬಾವಾ ಅಧಿಕಾರ ಸ್ವೀಕಾರ ಮುಂದೂಡಿಕೆ

Update: 2019-05-31 15:57 GMT

ಬೆಂಗಳೂರು, ಮೇ 31: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಡಿಸಿಪಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ದಿಢೀರ್ ಮುಂದೂಡಿಕೆಯಾಗಿದೆ.

ಶುಕ್ರವಾರ ಸಂಜೆ 4.30ಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್, ಜಿ.ಎ.ಬಾವಾ ಅವರಿಗೆ ಅಧಿಕಾರ ಹಸ್ತಾಂತರಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಕೆಲವು ಗೊಂದಲಗಳ ಕಾರಣಕ್ಕಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಅಲ್ಪಸಂಖ್ಯಾತರ ಆಯೋಗದ ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಲು ಮಧ್ಯಾಹ್ನ 3 ಗಂಟೆಗೆ ಕಚೇರಿಗೆ ಆಗಮಿಸಿದ್ದರು. ಆದರೆ, ನಾಲ್ಕು ಗಂಟೆ ವೇಳೆಗೆ ಜಿ.ಎ.ಬಾವಾ ಅವರ ಅಧಿಕಾರ ಸ್ವೀಕಾರ ಸಮಾರಂಭ ಮುಂದೂಡಲ್ಪಟ್ಟ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ.ಪಾಟೀಲ್, ತಮ್ಮ ಆಪ್ತ ಎ.ಎಂ.ಹಿಂಡಸಗೇರಿಯನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ಮಾಡುವಂತೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಜಿ.ಎ.ಬಾವಾರನ್ನು ಅಧಿಕಾರ ಸ್ವೀಕರಿಸದಂತೆ ಪಕ್ಷ ಹಾಗೂ ಸರಕಾರ ಸೂಚಿಸಿದೆ ಎನ್ನಲಾಗುತ್ತಿದೆ. ಈ ಸಂಬಂಧ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಜಿ.ಎ.ಬಾಬಾ, ನನ್ನ ನೇಮಕಾತಿ ಆದೇಶವನ್ನು ತಡೆ ಹಿಡಿಯಲಾಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದಾಗಿ ಅಧಿಕಾರ ಸ್ವೀಕರಿಸುವುದನ್ನು ಮುಂದೂಡಲಾಗಿದೆ. ಈ ಸಂಬಂಧ ಯಾವುದೇ ಸಮಸ್ಯೆಗಳಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News