ಹಾಸನ: ನೂತನ ಜಿಲ್ಲಾಧಿಕಾರಿಯಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ಅಕ್ರಂ ಪಾಷ

Update: 2019-05-31 15:18 GMT

ಹಾಸನ, ಮೇ.31:  ನೂತನ ಜಿಲ್ಲಾಧಿಕಾರಿಯಾಗಿ ಅಕ್ರಂ ಪಾಷ ಅವರು ಎರಡನೆಬಾರಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ವರ್ಗಾವಣೆಗೊಂಡಿದ್ದ ಅವರು ನಿರ್ಗಮಿತ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಂದ ಅಧಿಕಾರ ವಹಿಸಿಕೊಂಡರು.

ಇದೇ ವೇಳೆ ಕಳೆದ ಸುಮಾರು 2 ತಿಂಗಳ ಕಾಲ ಜಿಲ್ಲಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.

ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿ ಮಾಡಿದ ಸೇವೆ ತೃಪ್ತಿ ತಂದಿದೆ ಹಾಗೂ ಹೆಚ್ಚಿನ ಅನುಭವವನ್ನು ನೀಡಿದೆ. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮುಕ್ತಾಯಗೊಂಡಿದ್ದು ಇದಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಹಾಸನದಲ್ಲಿ ಸಮರ್ಥ ಅಧಿಕಾರಿಗಳ ದೊಡ್ಡ ಪಡೆ ಇದೆ. ಹೇಳಿದ ತಕ್ಷಣ ಅರ್ಥ ಮಾಡಿಕೊಂಡು ಕೆಲಸ ಮಾಡುವವರು ಹೆಚ್ಚಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನಷ್ಟು ಅಭಿವೃದ್ಧಿ ನಿರೀಕ್ಷಿಸಬಹುದಾಗಿದೆ ಎಂದರು.

ಮತ್ತೆ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಕ್ರಂ ಪಾಷ ಅವರು ಮಾತನಾಡಿ, ಯಶಸ್ವಿ ಚುನಾವಣೆ ನಡೆಸುವಲ್ಲಿ ಜಿಲ್ಲಾಧಿಕಾರಿಗಳ ಜೊತೆಗೆ ಸಹ ಅಧಿಕಾರಿ ಸಿಬ್ಬಂದಿಗಳ ಜವಾಬ್ದಾರಿ ಹೆಚ್ಚು. ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆ ಸಂಘಟಿಸುವಲ್ಲಿ ಎಲ್ಲರೂ ಉತ್ತಮ ಸೇವೆ ಸಲ್ಲಿಸಿದ್ದು ಎಲ್ಲರೂ ಅಭಿನಂದನಾರ್ಹರು ಎಂದರು.

ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಯುವ ಅಧಿಕಾರಿಯಾಗಿದ್ದು ಮುಂದೆ ರಾಜ್ಯ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಲಿದ್ದು, ಆ ವೇಳೆ ಹಾಸನ ಜಿಲ್ಲೆಗೆ ವಿಶೇಷ ಆಧ್ಯತೆ ನೀಡಬೇಕು ಎಂದು ಕೋರಿ ಶುಭ ಹಾರೈಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯ ಪ್ರಕಾಶ್ ಅವರು ಮಾತನಾಡಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಅಕ್ರಂ ಪಾಷ ಅವರಿಬ್ಬರು ಅತ್ಯಂತ ಕ್ರಿಯಾಶೀಲ ಹಾಗೂ ಸಮರ್ಥ ಆಡಳಿತದಾರರು, ಹೃದಯವಂತ ಅಧಿಕಾರಿಗಳಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಗೊಂದಲ ರಹಿತವಾಗಿ ಚುನಾವಣೆ ಸಂಘಟಿಸುವಲ್ಲಿ ಹಾಗೂ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಡೆಸುವಲ್ಲಿ ಇಬ್ಬರು ಅಧಿಕಾರಿಗಳು ಶಕ್ತಿ ಮೀರಿ ಶ್ರಮಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಕ್ರಂ ಪಾಷ ಅವರು ಚುನಾವಣೆ ಸಂದರ್ಭ ವರ್ಗಾವಣೆ ಹೊಂದಿ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರ ಸ್ವೀಕರಿಸಿದ ಮೇಲೂ ಹಾಸನ ಜಿಲ್ಲೆಯ ಉದ್ಯೋಗ ಖಾತ್ರೆ ಯೋಜನೆಯಡಿ 51 ಕೋಟಿ ರೂಪಾಯಗಳ ಬಾಕಿ ಅನುದಾನ ಬಿಡುಗಡೆ ಮಾಡಿಕೊಟ್ಟು ಸಹಕರಿಸಿದ್ದನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಅತ್ಯಂತ ಕ್ರಿಯಾ ಶೀಲರಾಗಿದ್ದು ಅವರಿಗೆ ಮುಂದೆ ಉತ್ತಮ ಹುದ್ದೆಗಳು ಸಿಗಲೆಂದು ಡಾ. ಕೆ.ಎನ್. ವಿಜಯಪ್ರಕಾಶ್ ಅವರು ಈ ಸಂದರ್ಭದಲ್ಲಿ ಹಾರೈಸಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಉಪವಿಭಾಗಾಧಿಕಾರಿ ಡಾ. ಹೆಚ್.ಎನ್. ನಾಗರಾಜ್ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು  ಇಲಾಖೆ ಉಪ ನಿರ್ದೇಶಕರಾದ ಸವಿತ ಅವರು ಮಾತನಾಡಿ, ಇಬ್ಬರೂ ಅಧಿಕಾರಿಗಳ ಸೇವಾದಕ್ಷತೆ, ಚುನಾವಣೆ ಸಂದರ್ಭದಲ್ಲಿ ವಹಿಸಿದ ಮುಂದಾಳತ್ವ, ಸರಳತೆಗಳ ಬಗ್ಗೆ ವಿವರಿಸಿದರು. ಮುಜರಾಯಿ ತಹಸೀಲ್ದಾರ್ ಶಾರದಾಂಬ ಅವರು ಸ್ವಾಗತಿಸಿದರು.

ಸಕಲೇಶಪುರ ಉಪವಿಭಾಗಾಧಿಕಾರಿ ಕವಿತಾ ರಾಜಾರಾಮ್, ನಗರಸಭೆ ಆಯುಕ್ತರಾದ ರೂಪಶೆಟ್ಟಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News