ಸಾಮಾಜಿಕ ಸಾಮರಸ್ಯ ರಮಝಾನ್ ಸಂದೇಶ: ಎಚ್.ಡಿ.ದೇವೇಗೌಡ

Update: 2019-05-31 15:34 GMT

ಬೆಂಗಳೂರು, ಮೇ 31: ಸಮಾಜದಲ್ಲಿ ಸಾಮರಸ್ಯ ಭಾವನೆಯನ್ನು ಮೂಡಿಸುವುದೇ ಪವಿತ್ರ ರಮಝಾನ್ ಮಾಸದ ಸಂದೇಶವಾಗಿದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.

ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಆಯೋಜಿಸಿದ್ದ ಇಫ್ತಾರ್ ಸೌಹಾರ್ದ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಗತ್ತಿನೆಲ್ಲೆಡೆ ಇಂದು ಕೌರ್ಯ, ಹಿಂಸೆ ತಾಂಡವವಾಡುತ್ತಿದೆ. ಶಾಂತಿ, ಸೌಹಾರ್ದತೆ ಅನ್ನೋದು ಮರೀಚಿಕೆಯಾಗುತ್ತಿದೆ. ರಮಝಾನ್ ಮಾಸವು ಎಲ್ಲೆಡೆ ಪ್ರೀತಿ, ಶಾಂತಿ ಹಾಗೂ ಸೌಹಾರ್ದತೆಯನ್ನು ಸಾರುವಂತೆ ಎಲ್ಲರಿಗೂ ಮಾರ್ಗದರ್ಶನ ನೀಡಲಿ ಎಂದು ಅವರು ಹೇಳಿದರು.

ಅಧಿಕಾರ ಇರಲಿ, ಇಲ್ಲದಿರಲಿ, ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ನಾನು ಮುಸ್ಲಿಂ ಸಹೋದರರಿಗಾಗಿ ಇಫ್ತಾರ್ ಸೌಹಾರ್ದ ಕೂಟವನ್ನು ಆಯೋಜಿಸಿಕೊಂಡು ಬಂದಿದ್ದೇನೆ. ಆದರೆ, ಈ ವರ್ಷ ನನ್ನ ಆರೋಗ್ಯದ ಸಮಸ್ಯೆಯಿಂದಾಗಿ ಇಫ್ತಾರ್ ಕೂಟ ಆಯೋಜಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಇವತ್ತು ಈ ಸಾಲಿನ ರಮಝಾನ್ ಮಾಸದ ಕೊನೆಯ ಶುಕ್ರವಾರ, ಆದುದರಿಂದ ತಾವು ಈ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಬಿ.ಎಂ.ಫಾರೂಕ್, ಒತ್ತಾಯಿಸಿದ್ದರಿಂದ ನಾನು ಬಂದಿದ್ದೇನೆ. ವೈದ್ಯರ ಸಲಹೆಯಂತೆ ನಾನು ಮನೆಯನ್ನು ಬಿಟ್ಟು ಬೇರೆ ಎಲ್ಲಿಯೂ ಹೋಗುತ್ತಿಲ್ಲ ಎಂದು ದೇವೇಗೌಡ ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಮಾತನಾಡಿ, ಪವಿತ್ರ ರಮಝಾನ್ ಮಾಸದಲ್ಲಿ ಆಚರಿಸುವ ಉಪವಾಸ ವೃತವು ನಮ್ಮ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾದದ್ದು. ದೇಹದಲ್ಲಿ ಹೊಸ ಚೈತನ್ಯವನ್ನು ಮೂಡಿಸುವಲ್ಲಿ ಉಪವಾಸ ಸಹಕಾರಿಯಾಗಿದೆ ಎಂದರು.

ರಮಝಾನ್ ಮಾಸದಲ್ಲಿ ನಮ್ಮ ರಾಜ್ಯ ಹಾಗೂ ದೇಶದ ಹಿತಕ್ಕಾಗಿ ನಾವು ಪ್ರಾರ್ಥಿಸಬೇಕಿದೆ. ಸಮಾಜದಲ್ಲಿರುವ ಬಡವರು, ಅಶಕ್ತರು ಎದುರಿಸುತ್ತಿರುವ ಸಂಕಷ್ಟಗಳಿಂದ ಅವರು ಮುಕ್ತರಾಗುವಂತೆ ಭಗವಂತ ಕರುಣೆ ತೋರಿಸಲಿ. ನಮ್ಮ ಜೀವನದಲ್ಲಿ ರಮಝಾನ್ ತಿಂಗಳು ಪದೇ ಪದೇ ಬರುತ್ತಿರಲಿ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್, ಸಚಿವರಾದ ಎಂ.ಸಿ.ಮನಗೂಳಿ, ಡಿ.ಸಿ.ತಮ್ಮಣ್ಣ, ಮಾಜಿ ಸಚಿವ ಬಸವರಾಜ ಹೊರಟ್ಟಿ, ಶಾಸಕ ಎನ್.ಎ.ಹಾರೀಸ್, ರಾಜ್ಯ ಸರಕಾರದ ಹೊಸದಿಲ್ಲಿಯ ವಿಶೇಷ ಪ್ರತಿನಿಧಿ ಸಯ್ಯದ್ ಮೊಹಿದ್ ಅಲ್ತಾಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News