ಮೈತ್ರಿ ಸರಕಾರ ಅಸ್ಥಿರಕ್ಕೆ ಕೈ ಹಾಕಬೇಡಿ ಎಂದು ವರಿಷ್ಠರ ಕಟ್ಟಪ್ಪಣೆ: ಯಡಿಯೂರಪ್ಪ
ಬೆಂಗಳೂರು, ಮೇ 31: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ಥಿರಗೊಳಿಸುವ ಯಾವುದೇ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ಪಕ್ಷದ ವರಿಷ್ಠರು ನಮಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಇದೀಗ ಹೊಸದಿಲ್ಲಿಯಿಂದ ಆಗಮಿಸುತ್ತಿದ್ದು, ನಾವು ಅಧಿಕಾರಕ್ಕೆ ಯಾವುದೇ ಸಂದರ್ಭದಲ್ಲಿ ಹಾತೊರೆಯುತ್ತಿಲ್ಲ, ನಮಗೆ ಅದರ ಅಗತ್ಯವೂ ಇಲ್ಲ. ವಿಪಕ್ಷದಲ್ಲಿ ಕೂತು ಕೆಲಸ ಮಾಡಲು ನಮಗೆ ಶಕ್ತಿ ಇದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಾಲ್ಕು ಮಂದಿ ಶಾಸಕರನ್ನು ನಮ್ಮ ಬಳಿ ಕಳುಹಿಸಿ ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ. ಸಿದ್ದರಾಮಯ್ಯರ ಈ ನಡೆ ಮೇಲ್ನೋಟಕ್ಕೆ ನಮಗೆ ಗೊತ್ತಾಗಿದೆ. ಹೀಗಾಗಿ ವರಿಷ್ಠರು ಸರಕಾರ ಅಸ್ಥಿರಗೊಳಿಸಲು ಹೋಗಬೇಡಿ ಅಂತ ಸೂಚನೆ ನೀಡಿದ್ದಾರೆಂದು ತಿಳಿಸಿದರು.
ರಾಜ್ಯದ ಮೈತ್ರಿ ಸರಕಾರ ರೈತರ ಸಾಲಮನ್ನಾ, ಬರ ಪರಿಹಾರ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಯಡಿಯೂರಪ್ಪ, ಮಧ್ಯಂತರ ಚುನಾವಣೆಯ ಬಗ್ಗೆ ಯಾವುದೇ ಊಹೆ ಮಾಡಿ ನಾನು ಮಾತಾಡುವುದಿಲ್ಲ. ಮೈತ್ರಿ ಮಖಂಡರು ಅವರೇ ಕಿತ್ತಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಬಳ್ಳಾರಿಯ ಜಿಂದಾಲ್ ಕಂಪೆನಿಗೆ ಕಡಿಮೆ ದರದಲ್ಲಿ ಸಾವಿರಾರು ಎಕರೆ ಭೂಮಿಯನ್ನು ನೀಡಿರುವುದು ಸರಿಯಲ್ಲ. ಗುತ್ತಿಗೆ ನೀಡದಿದ್ದ ಭೂಮಿಯನ್ನು ಅಗ್ಗದ ಬೆಲೆಗೆ ನೀಡಲು ಮುಂದಾಗಿರುವುದು ಅಕ್ಷಮ್ಯ ಎಂದು ಅವರು, ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಎಚ್ಚರಿಸಿದರು.
ಜೂನ್ 5ಕ್ಕೆ ಶಾಸಕರು, ನೂತನ ಸಂಸದರ ಸಭೆ ಕರೆದಿದ್ದು, ಸಂಸದರಿಗೆ ಸನ್ಮಾನ ಹಾಗೂ ಜನವಿರೋಧಿ ರಾಜ್ಯದ ಮೈತ್ರಿ ಸರಕಾರದ ವಿರುದ್ಧ ಹೋರಾಟ ರೂಪಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಕರ್ನಾಟಕ ರಾಜ್ಯ ಪ್ರತಿನಿಧಿಸುತ್ತಿರುವವರಿಗೆ ಉತ್ತಮ ಇಲಾಖೆಗಳನ್ನು ನೀಡಿರುವುದು ಅತೀವ ಸಂತಸ ತಂದಿದೆ. ಇನ್ನೂ ಎರಡು ಸ್ಥಾನದ ನಿರೀಕ್ಷೆ ಇದ್ದು, ಮೋದಿ ಕ್ರಮ ನಮಗೆ ತೃಪ್ತಿ ತಂದಿದೆ’
-ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ