ಸರಕಾರಿ ಶಾಲೆಗಳಿರುವ ಕಡೆಗೆ ಖಾಸಗಿ ಶಾಲೆಗೆ ಉಚಿತ ಪ್ರವೇಶವಿಲ್ಲ: ಹೈಕೋರ್ಟ್ ಆದೇಶ
ಬೆಂಗಳೂರು, ಮೇ 31: ಸರಕಾರಿ ಹಾಗೂ ಅನುದಾನಿತ ಶಾಲೆಗಳು ಒಂದು ಕಿ.ಮೀ ವ್ಯಾಪ್ತಿಯಲ್ಲಿದ್ದರೆ ಅಂತಹ ಕಡೆಗೆ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅಡಿ ಖಾಸಗಿ ಶಾಲೆಗಳಿಗೆ ಉಚಿತ ಪ್ರವೇಶವಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿ, ರಾಜ್ಯ ಸಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ಶಿಕ್ಷಣ ಹಕ್ಕುಗಳ ಟ್ರಸ್ಟ್ ಹಾಗೂ ಪೋಷಕರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ. ಶುಕ್ರವಾರ ಮೇಲಿನ ಆದೇಶವನ್ನು ನೀಡಿದೆ.
ರಾಜ್ಯ ಸರಕಾರ ಸರಕಾರಿ ಶಾಲೆಗಳನ್ನು ಉಳಿಸುವುದಕ್ಕಾಗಿ 2019ರ ಜ.30ರಂದು ಆರ್‌ಟಿಇ ಕಾಯ್ದೆಗೆ ತಿದ್ದುಪಡಿ ತಂದು ಆರ್‌ಟಿಇ ಅಡಿ ಪ್ರವೇಶ ಬಯಸುವವರ ಅಕ್ಕ ಪಕ್ಕದಲ್ಲಿ ಸರಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಿದ್ದರೆ ಅಂತಹ ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿತ್ತು.
ಪೋಷಕರ ಸಂಘಗಳು ರಾಜ್ಯ ಸರಕಾರ ಆರ್‌ಟಿಇ ಕಾಯ್ದೆಯನ್ನು ತಿದ್ದುಪಡಿ ತಂದರೆ ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಯಬೇಕೆಂಬ ಆಸೆ ಇರುವವರಿಗೆ ಹಾಗೂ ಕೀಳರಿಮೆ ಇಂದ ಹೊರ ಬರಲು ಯತ್ನಿಸುತ್ತಿರುವವರಿಗೆ ಅಡ್ಡಗಾಲು ಹಾಕಿದಂತಾಗುತ್ತದೆ. ಹೀಗಾಗಿ, ರಾಜ್ಯ ಸರಕಾರ ಜಾರಿಗೆ ತಂದಿರುವ ಆರ್‌ಟಿಇ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.
ರಾಜ್ಯ ಸರಕಾರ 1 ಸಾವಿರ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಅಲ್ಲದೆ, ಖಾಸಗಿ ಶಾಲೆಗಳಿಗೆ ನೀಡುವ ಹಣವನ್ನೆ ಸರಕಾರಿ ಶಾಲೆಗಳಿಗೆ ನೀಡಿದರೆ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಕರ್ಯವನ್ನೂ ನೀಡಬಹುದಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು. ವಕೀಲರ ವಾದ ಆಲಿಸಿದ್ದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತ್ತು. ಶುಕ್ರವಾರ ಪಿಐಎಲ್ ಅನ್ನು ವಜಾಗೊಳಿಸಿ, ರಾಜ್ಯ ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ.
ಏನಿದು ಆರ್‌ಟಿಇ ಕಾಯ್ದೆ: ಚಾಲ್ತಿಯಲ್ಲಿರುವ ಆರ್‌ಟಿಇ ಕಾಯ್ದೆ ಪ್ರಕಾರ ಉಚಿತ ಸೀಟು ಬಯಸುವ ಬಡ ವಿದ್ಯಾರ್ಥಿಗಳು ತಾವು ವಾಸವಿರುವ ಒಂದು ಕಿಮೀ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳಿಗೆ ಕಡ್ಡಾಯವಾಗಿ ಶೇ.25ಸೀಟು ನೀಡಬೇಕಿತ್ತು. ಈ ಕಾಯ್ದೆಯಡಿಯಲ್ಲಿ ಉಚಿತ ಸೀಟು ಪಡೆದ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಸರಕಾರವೇ ಭರಿಸುತ್ತಿತ್ತು. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಮಕ್ಕಳ ಪೋಷಕರು ಸಹ ಹೆಚ್ಚಾಗಿ ಸರಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು.