ಕಾಡ್ಗಿಚ್ಚು ಸಂಭವಿಸಿ ನಷ್ಟವಾದರೆ ಅರಣ್ಯ ಅಧಿಕಾರಿಗಳು ಜವಾಬ್ದಾರಿ ಹೊರಬೇಕು: ಹೈಕೋರ್ಟ್ ನಿರ್ದೇಶ

Update: 2019-05-31 16:19 GMT

ಬೆಂಗಳೂರು, ಮೇ 31: ಕಾಡ್ಗಿಚ್ಚು ಸಂಭವಿಸಿ ಉಂಟಾಗುವ ಅರಣ್ಯ, ಪ್ರಾಣಿ ಮತ್ತು ಪಕ್ಷಿ ಸಂಕುಲದ ರಕ್ಷಣೆಗೆ ಕೇವಲ ಅರಣ್ಯ ಇಲಾಖೆ ಅಧಿಕಾರಿಗಳು ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಕೊಡಗು ಜಿಲ್ಲೆಯಲ್ಲಿ ಕಾಡ್ಗಿಚ್ಚಿನಿಂದ ಅರಣ್ಯ ಸಂಪತ್ತು ರಕ್ಷಣೆಗೆ ರಾಜ್ಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ಕೊಡಗು ಜಿಲ್ಲೆ ಕಾತಕೇರಿ ಗ್ರಾಮದ ಕೆ.ವಿ.ರವಿ ಚೆಂಗಪ್ಪ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದ ನ್ಯಾಯಮೂರ್ತಿ ಬಿ.ವೀರಪ್ಪಅವರಿದ್ದ ಏಕಸದಸ್ಯ ನ್ಯಾಯಪೀಠ ಕಾಡಿಗೆ ಬೀಳುವ ಬೆಂಕಿಯಿಂದ ಅರಣ್ಯ ರಕ್ಷಣೆ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಕೆಲವು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ರಾಜ್ಯದ ಎಲ್ಲ ಅರಣ್ಯ ವಲಯಗಳಲ್ಲಿ ಕಾಡ್ಗಿಚ್ಚು ತಡೆಗೆ ಅಗತ್ಯವಾದ ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ತಕ್ಷಣವೇ ಮುಂದಾಗಬೇಕು. ಇದಕ್ಕಾಗಿ ಎಲ್ಲ ಇಲಾಖೆಗಳ ಸಹಕಾರ ಪಡೆಯಬೇಕು. ಅವಘಡ ಸಂಭವಿಸಿದರೆ ಸ್ಥಳೀಯ ಅರಣ್ಯ ಅಧಿಕಾರಿಗಳನ್ನು ಹೊಣೆ ಮಾಡಬೇಕು.

ಪ್ರಕತಿ ಸಂರಕ್ಷಣೆಗೆ ಸುಶಿಕ್ಷಿತರು ಮತ್ತು ಅನಕ್ಷರಸ್ಥರೂ ಸೇರಿದಂತೆ ಸಮಸ್ತ ಜನಕೋಟಿ ಕಟಿಬದ್ಧರಾಗಬೇಕಾದ ಕಾಲ ಈಗ ಕೂಡಿ ಬಂದಿದೆ.ಮನುಷ್ಯ ತನ್ನ ಮಿತಿ ಮೀರಿದ್ದಾನೆ. ಇದರಿಂದ ವನ್ಯಜೀವಿ ಮತ್ತು ಮಾನವ ಸಂಘರ್ಷ ಕಾಣಿಸಿಕೊಳ್ಳುತ್ತಿರುವುದು ಅಪಾಯಕಾರಿ ಮುನ್ಸೂಚನೆ. ನಾವೀಗ ಎಚ್ಚೆತ್ತುಕೊಳ್ಳದೇ ಹೋದರೆ ಭವಿಷ್ಯದಲ್ಲಿ ಮಾನವನ ಅಸ್ತಿತ್ವವೇ ಇಲ್ಲದಂತಾಗುತ್ತದೆ.

ಅರಣ್ಯ ಸಂರಕ್ಷಣೆಗೆ ಸ್ಥಳೀಯರನ್ನು ಒಳಗೊಂಡ ಅಧಿಕಾರಿಗಳ ತಂಡ ರಚಿಸಬೇಕು. ಈ ತಂಡದಲ್ಲಿ ಕೊಡುಗು ಜಿಲ್ಲೆಗೆ ಅನ್ವಯ ಆಗುವಂತೆ ಅರ್ಜಿದಾರ ಕೆ.ವಿ.ರವಿ ಚೆಂಗಪ್ಪಅವರನ್ನೂ ಸೇರ್ಪಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು. ಇದಕ್ಕೆ ಸರಕಾರಿ ವಕೀಲ ಹರ್ಷ ಅವರು ಆಕ್ಷೇಪ ವ್ಯಕ್ತಪಡಿಸಿ, ಅವರನ್ನು ಸೇರ್ಪಡೆ ಮಾಡಬಾರದು ಎಂದು ಮನವಿ ಮಾಡಿದರು. ಆದರೆ, ನ್ಯಾಯಮೂರ್ತಿಗಳು ಈ ಮನವಿಯನ್ನು ಸಾರಾಸಗಟು ತಳ್ಳಿ ಹಾಕಿದರು.

ಇದೇ ವೇಳೆ ಅರ್ಜಿದಾರರ ಪರ ವಕೀಲ ಎಚ್.ಪವನಚಂದ್ರಶೆಟ್ಟಿ, ಅವಘಡಗಳ ಮುಂಚಿತ ಅರಿವಿಗೆ ಡ್ರೋಣ್ ಕ್ಯಾಮೆರಾಗಳ ವ್ಯವಸ್ಥೆ ಮಾಡಬೇಕು ಎಂದು ಕೋರಿದರು. ಇದಕ್ಕೂ ಹರ್ಷ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥೆಯ ಪರಿಧಿಯಲ್ಲೇ ಎಲ್ಲ ರಕ್ಷಣಾ ಕ್ರಮ ಕೈಗೊಳ್ಳಲು ಸರಕಾರ ಸಮರ್ಥವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News