ಜೂ.30ರೊಳಗೆ ಬೇಡಿಕೆ ಈಡೇರಿಸದಿದ್ದರೆ ಪ್ರಾಥಮಿಕ ಶಾಲಾ ಶಿಕ್ಷಕರ ವಿಧಾನಸೌಧ ಚಲೋ

Update: 2019-05-31 17:02 GMT

ಬೆಂಗಳೂರು, ಮೇ 31: ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸಿರುವ ಆದೇಶ ರದ್ದುಪಡಿಸುವುದೂ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮೂರು ಹಂತದಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳುವುದಾಗಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಎಚ್ಚರಿಸಿದೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ, 2014ರ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿವರೆಗೆ ಬೋಧಿಸಲು ಮಾತ್ರ ಸೀಮಿತಗೊಳಿಸಿ ಸರಕಾರ ಸುತ್ತೋಲೆ ಹೊರಡಿಸಿದೆ.

ಈ ಆದೇಶ ರದ್ದುಪಡಿಸಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ ಅವರ ವೇತನ ಶ್ರೇಣಿಯನ್ನೇ ನಮಗೂ ನಿಗದಿಪಡಿಸಬೇಕೆಂದು, ಜೂ.30ರೊಳಗೆ ಬೇಡಿಕೆ ಈಡೇರಿಸದಿದ್ದರೆ ಮೂರು ಹಂತಗಳಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು.

ಮೊದಲನೇ ಹಂತದ ಹೋರಾಟದನ್ವಯ ಸಮಯ ನಿರ್ಣಯವನ್ನು ಮನವಿ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು. 2ನೇ ಹಂತದಲ್ಲಿ ಜೂ.9ರಂದು ಜಿಲ್ಲಾ ಶಿಕ್ಷಕರನ್ನೊಳಗೊಂಡಂತೆ ಬೃಹತ್ ರ್ಯಾಲಿ ನಡೆಸಲಾಗುವುದು. ಸರಕಾರ ಹಕ್ಕೋತ್ತಾ ಯವನ್ನು ಪರಿಗಣಿಸದಿದ್ದರೆ 3ನೇ ಹಂತದಲ್ಲಿ ಸೆ.5ರ ಶಿಕ್ಷಕರ ದಿನಾಚರಣೆಯಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮೂರು ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು. ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು, ವಿಷಯವಾರು ಶಿಕ್ಷಕರ ನೇಮಕ ಮಾಡಬೇಕು, ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೈ ಬಿಡಬೇಕು, 6ನೇ ವೇತನ ಆಯೋಗದನ್ವಯ ಮುಖ್ಯ ಶಿಕ್ಷಕರಿಗೆ ಭಡ್ತಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪ ನಿರ್ದೇಶಕರ ಹುದ್ದೆವರೆಗೂ ಭಡ್ತಿ ನೀಡಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News