ಶೀಘ್ರವೇ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಚರ್ಚೆ:ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-05-31 17:19 GMT

ಬೆಂಗಳೂರು, ಮೇ 31: ಪೊಲೀಸ್ ಸಿಬ್ಬಂದಿ ವೇತನ, ಭತ್ತೆ ಹೆಚ್ಚಳ ಸೇರಿದಂತೆ ಸರಕಾರದ ಇನ್ನಿತರ ಇಲಾಖೆ ಸಿಬ್ಬಂದಿ ನಡುವಿನ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ರಾಘವೇಂದ್ರ ಔರಾದ್ಕರ್ ವರದಿ ಅನುಷ್ಠಾನ ಸಂಬಂಧ ಶೀಘ್ರದಲ್ಲೆ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಘವೇಂದ್ರ ಔರಾದ್ಕರ್ ವರದಿ ಬಗ್ಗೆ ಒಂದು ವಾರದಲ್ಲಿ ಸಿಎಂ ಜತೆ ಚರ್ಚಿಸಿ, ವರದಿ ಅನುಷ್ಠಾನಗೊಳಿಸುವ ಸಂಬಂಧ ಮುಂದಿನ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಸುರಕ್ಷತೆಗೆ ಆದ್ಯತೆ: ಬಸ್, ರೈಲ್ವೆ ನಿಲ್ದಾಣ, ಮಾಲ್, ಸಾಫ್ಟ್‌ವೇರ್ ಕಂಪೆನಿಗಳು ಸೇರಿದಂತೆ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಆಧುನಿಕ ವ್ಯವಸ್ಥೆಯುಳ್ಳ ಸಿಸಿಟಿವಿ ಅಳವಡಿಸುವ ಸಂಬಂಧ ವಿವಿಧ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.

ಇಲಾಖೆಗೆ ಕಾಯಕಲ್ಪ: ಅಪರಾಧ ಕೃತ್ಯಗಳ ನಿಯಂತ್ರಣ ದೃಷ್ಟಿಯಿಂದ ಪೊಲೀಸ್ ಇಲಾಖೆಗೆ ಕಾಯಕಲ್ಪ ನೀಡಲಾಗುವುದು. ಇಲಾಖೆ ಸುಧಾರಣೆ ಮತ್ತು ಮೇಲ್ದರ್ಜೆಗೇರಿಸಲಾಗುವುದು ಎಂದ ಅವರು, ಸೈಬರ್ ಅಪರಾಧ ತಡೆಗೆ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ಸಿಬ್ಬಂದಿ ನೇಮಕ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ತನಿಖೆ ಪ್ರಗತಿ: ನನ್ನ ಹೆಸರಿನಲ್ಲಿನಕಲಿ ಪತ್ರ ಸೃಷ್ಟಿಗೆ ಸಂಬಂಧ ಸಿಐಡಿ ತನಿಖೆ ಪ್ರಗತಿಯಲಿದ್ದು, ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದು, ಇದರಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಆದರೆ, ಈ ಕೃತ್ಯವನ್ನು ಸಮರ್ಥನೆ ಮಾಡುವ ಬಿಜೆಪಿ ಮುಖಂಡರ ತೇಜೋವಧೆ ಮಾಡಿದ್ದರೆ, ಅವರು ಇಂತಹ ಕೃತ್ಯದ ಸಮರ್ಥನೆ ಮಾಡುತ್ತಿದ್ದರೇ ಎಂದು ಪಾಟೀಲ್ ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News