ಅಭಿಯೋಜಕರ ಹುದ್ದೆಗಳ ಭರ್ತಿಗೆ ಕ್ರಮ: ಎಂ.ಬಿ.ಪಾಟೀಲ್

Update: 2019-05-31 17:30 GMT

ಬೆಂಗಳೂರು, ಮೇ 30: ರಾಜ್ಯ ಅಭಿಯೋಗ ಹಾಗೂ ಸರಕಾರಿ ವ್ಯಾಜ್ಯಗಳ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶುಕ್ರವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಅಭಿಯೋಜನಕಾರಿಗಳ ಸಂಘ ಹಾಗೂ ಅಭಿಯೋಗ ಮತ್ತು ವ್ಯಾಜ್ಯಗಳ ಇಲಾಖೆ ವತಿಯಿಂದ ಆಯೋಜಿಸಿದ 16ನೆ ರಾಜ್ಯಮಟ್ಟದ ರಾಜ್ಯಮಟ್ಟದ ಸಮ್ಮೇಳನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯಾದ್ಯಂತ ಸುಮಾರು 700 ಕ್ಕೂ ಅಧಿಕ ಅಭಿಯೋಜಕ ಅಧಿಕಾರಿಗಳ ಅಗತ್ಯವಿದ್ದು, ಪ್ರಸ್ತುತ 400 ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಉಳಿದಿರುವವರನ್ನು ಭರ್ತಿ ಮಾಡಬೇಕು ಎಂಬ ಬೇಡಿಕೆ ಬಂದಿದೆ. ಈ ಸಂಬಂಧ ನಾವು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದ ಅವರು, ಹುದ್ದೆಗಳನ್ನು ಭರ್ತಿ ಮಾಡುವುದರಿಂದ ಬದಲಾವಣೆ ಆಗಲ್ಲ. ಕೆಲಸ ಮಾಡುವವರಿಗೆ ಬದ್ಧತೆ ಇರಬೇಕು ಎಂದು ನುಡಿದರು.

ರಾಜ್ಯದ ನ್ಯಾಯಾಂಗ ವ್ಯವಸ್ಥೆಗೆ ತನ್ನದೇ ಆದ ದಕ್ಷತೆ, ಹೆಗ್ಗಳಿಕೆ ಇದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗಕ್ಕೆ ನೈತಿಕ ಶಕ್ತಿ ಒದಗಿಸಲು ಕಾರ್ಯಾಂಗವನ್ನು ಸ್ಥಾಪನೆ ಮಾಡಲಾಗಿದೆ. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ಪರಸ್ಪರ ಸಹಕಾರವಿಲ್ಲದೇ ಉತ್ತಮ ಆಡಳಿತ ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು.

ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವೆ ಸೇತುವೆಯಾಗಿ ಅಭಿಯೋಜನಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪಿತಸ್ಥ ಎಂದು ತೀರ್ಮಾನ ಆಗುವವರೆಗೂ ಅಪರಾಧಿ ಎನ್ನುವಂತಿಲ್ಲ. ಅಪರಾಧಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಪುರಾವೆಗಳನ್ನು ನೀಡಿ, ವಿಚಾರಣೆ ನಡೆಸಿ ಶಿಕ್ಷೆ ಕೊಡಿಸುವ ಕಾರ್ಯವನ್ನು ಅಭಿಯೋಜನಾಧಿಕಾರಿ ಇಲಾಖೆ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಅಭಿಯೋಜಕ ಇಲಾಖೆಯಲ್ಲಿನ ಕೆಲವು ತಪ್ಪುಗಳನ್ನು ತಿದ್ದಿಕೊಳ್ಳಬೇಕಾದ ಅಗತ್ಯವಿದೆ ಹಾಗೂ ಹೆಚ್ಚುತ್ತಿರುವ ಅಪರಾಧಿ ಪ್ರಕರಣಗಳನ್ನು ಇಳಿಸಲು ಸರಕಾರದ ಪಾತ್ರವೂ ಹೆಚ್ಚಿದ್ದು, ಇಲಾಖೆಯ ಜತೆಗೆ ಸರಕಾರ ಸದಾ ಇರುತ್ತದೆ. ಅಗತ್ಯವಾದ ನೆರವು ಹಾಗೂ ಸಹಾಯ ನೀಡಲು ಬದ್ಧವಾಗಿದೆ ಎಂದು ನುಡಿದರು.

ಅಡ್ವೋಕೇಟ್ ಜನರಲ್ ಉದಯ ಹೊಳ್ಳ ಮಾತನಾಡಿ, ಮಾನವೀಯತೆ, ಸಾಮಾಜಿಕ ಜವಾಬ್ದಾರಿ ಹೆಚ್ಚಾದಂತೆ ಅಪರಾಧಗಳ ಪ್ರಮಾಣ ಕಡಿಮೆ ಆಗುತ್ತದೆ. ಯಾವುದೇ ಪ್ರಕರಣವಿದ್ದರೂ ಅದರ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿ, ಸೂಕ್ತ ಸಾಕ್ಷಾಧಾರಗಳಿಂದ ವಾದ ಮಂಡಿಸಬೇಕು. ಅದೇ ರೀತಿ, ಅಭಿಯೋನಜನಾಧಿಕಾರಿಗಳು ವಾದ ಮಂಡಿಸುವಾಗ ತಪ್ಪುಗಳಿದ್ದರೆ ತಿದ್ದಿ ಮುಂದುವರಿಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಭಿಯೋಜನಾಧಿಕಾರಿಗಳಾದ ಚಂದ್ರಮೌಳಿ, ಬಿ.ವಿ.ಆಚಾರ್ಯ, ಉಜ್ವಲ್ ನಿಕ್ಕಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News