‘ಸಿಇಟಿ-2019’ ಮಾಹಿತಿ ಮಾರ್ಪಡಿಸಲು ಅಂತಿಮ ಅವಕಾಶ

Update: 2019-05-31 17:31 GMT

ಬೆಂಗಳೂರು, ಮೇ 31: ಅಭ್ಯರ್ಥಿಗಳ ಮನವಿ ಮೇರೆಗೆ ಸಿಇಟಿ-2019ರ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಸಲ್ಲಿಸಿರುವ ಅರ್ಜಿಗಳಲ್ಲಿನ ಮಾಹಿತಿಯನ್ನು ಅರ್ಹತೆಗೆ ಅನುಗುಣವಾಗಿ ಮಾರ್ಪಡಿಸಲು ಅಭ್ಯರ್ಥಿಗಳಿಗೆ ಅಂತಿಮ ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಮೇ 31ರ ಬೆಳಗ್ಗೆ 11 ರಿಂದ ಜೂ.5ರ ಸಂಜೆ 5.30ರವರೆಗೆ ಬದಲಾಯಿಸಿಕೊಳ್ಳಬಹುದು ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿ: ಲೋಕೋಪಯೋಗಿ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ 570 ಗ್ರೂಪ್ ಬಿ ದರ್ಜೆಯ ಸಹಾಯಕ ಇಂಜಿನಿಯರ್ ಗ್ರೇಡ್-1ಹುದ್ದೆಗಳಿಗೆ ಹಾಗೂ ಗ್ರೂಪ್ ಸಿ ದರ್ಜೆಯ 300 ಕಿರಿಯ ಇಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಜೂ.10, 11 ಹಾಗೂ 12ರಂದು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು.

ಈ ದಿನಾಂಕಗಳಂದು ವಿಟಿಯು ಪರೀಕ್ಷೆಗಳು ಹಾಗೂ ಇತರೆ ಪರೀಕ್ಷೆಗಳು ಪೂರ್ವ ನಿಗದಿತವಾಗಿರುವುದರಿಂದ, ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕಗಳನ್ನು ಬದಲಾವಣೆ ಮಾಡಲು ಹಲವು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜೂ.22, 23 ಹಾಗೂ 24ರಂದು ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸಲಾಗುವುದು. ವಿವರವಾದ ಪರಿಷ್ಕೃತ ವೇಳಾಪಟ್ಟಿಯನ್ನು ರಾಜ್ಯ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗಿದೆ.

ಜುಲೈ 7ರಂದು 2019ನೇ ಸಾಲಿನ ಡಿಪ್ಲೊಮಾ ಸಿಇಟಿ ಪರೀಕ್ಷೆಯನ್ನು ನಡೆಸಲು ನಿಗದಿಪಡಿಸಲಾಗಿತ್ತು. ಅದೇ ದಿನಾಂಕದಂದು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್‌ನವರು ನಾಟಾ ಪರೀಕ್ಷೆಯು ನಿಗದಿಯಾಗಿರುವುದರಿಂದ ವೇಳಾಪಟ್ಟಿಯನ್ನು ಪರಿಷ್ಕರಿಸಿ ಜು.14ರಂದು ಡಿಸಿಇಟಿ-2019 ಅನ್ನು ನಡೆಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ಅನ್ನು ವೀಕ್ಷಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News