×
Ad

ಸ್ಥಳೀಯ ಸಂಸ್ಥೆಗಳ ಚುನಾವಣೆ: ಕಡೂರು ಪುರಸಭೆ ಅತಂತ್ರ, ಬಿಜೆಪಿಗೆ 2, ಕೈಗೆ 1 ಪಪಂ ಆಡಳಿತ

Update: 2019-05-31 23:09 IST

ಚಿಕ್ಕಮಗಳೂರು, ಮೇ 31: ಕಳೆದ ಬುಧವಾರ ಜಿಲ್ಲೆಯಲ್ಲಿ ನಡೆದ 1 ಪುರಸಭೆ ಹಾಗೂ ನಾಲ್ಕು ಪಟ್ಟಣ ಪಂಚಾಯತ್ ಚುನಾವಣೆಗಳ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಕಡೂರು ಪುರಸಭೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದೇ ಅಂತತ್ರಗೊಂಡಿದ್ದರೇ, ಕೊಪ್ಪ, ಶೃಂಗೇರಿ ಪಟ್ಟಣ ಪಂಚಾಯತ್‍ನಲ್ಲಿ ಬಿಜೆಪಿ ಬಹುಮತಗಳಿಸಿದೆ. ನರಸಿಂಹರಾಜುಪುರ ಪಪಂ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿದ್ದು, ಮೂಡಿಗೆರೆ ಪಪಂನಲ್ಲಿ ಬಿಜೆಪಿ ಸ್ಪಷ್ಟ ಬಹುಮತಗಳಿಸಿದ್ದರೂ ಅಧ್ಯಕ್ಷೆ ಸ್ಥಾನದ ಮೀಸಲಾತಿ ಗೊಂದಲದಿಂದಾಗಿ ಆಡಳಿತ ಯಾರಿಗೆ ಧಕ್ಕಲಿದೆ ಎಂಬುದು ಪ್ರಶ್ನೆಯಾಗಿದೆ.

ಜಿಲ್ಲೆಯ ಕಡೂರು ಪುರಸಭೆ, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ಪಟ್ಟಣ ಪಂಚಾಯತ್‍ಗಳಿಗೆ ಬುಧವಾರ ಚುನಾವಣೆ ನಡೆದಿದ್ದು, ಶುಕ್ರವಾರ ಬೆಳಗ್ಗೆಯಿಂದ ಇವಿಎಂ ಯಂತ್ರಗಳಲ್ಲಿ ದಾಖಲಾಗಿದ್ದ ಮತಗಳ ಎಣಿಕೆ ಕಾರ್ಯ ಮಧ್ಯಾಹ್ನದವರೆಗೂ ನಡೆಯಿತು.  11 ಸದಸ್ಯ ಬಲದ ಶೃಂಗೇರಿ, ಕೊಪ್ಪ ಪಟ್ಟಣ ಪಂಚಾಯತ್‍ಗಳಲ್ಲಿ ಬಿಜೆಪಿ ಬಹುಮತ ಪಡೆದು ಆಡಳಿತ ಹಿಡಿಯುವಲ್ಲಿ ಯಶಸ್ವಿಯಾಗಿದ್ದರೇ, ಇದೇ ಸದಸ್ಯ ಬಲದ ನರಸಿಂಹರಾಜಪುರ ಪಟ್ಟಣ ಪಂಚಾಯತ್‍ನಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಇನ್ನು 11 ಸದಸ್ಯ ಬಲದ ಮೂಡಿಗೆರೆ ಪಟ್ಟಣ ಪಂಚಾಯತ್‍ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆಯಾದರೂ ಪಪಂ ಅಧ್ಯಕ್ಷೆಯ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ಬಿಜೆಪಿಯಲ್ಲಿ ಎಸ್ಸಿ ಮಹಿಳಾ ಸದಸ್ಯೆ ಇಲ್ಲದ ಪರಿಣಾಮ ಅಧ್ಯಕ್ಷೆ ಸ್ಥಾನ ಕಾಂಗ್ರೆಸ್ ಪಾಲಾಗುವ ಸಂಭವ ಹೆಚ್ಚಿದೆ. ಪಪಂ ಆಡಳಿತ ಕಾಂಗ್ರೆಸ್ ಪಾಲಾಗಲಿದೆ ಎಂದು ಕಾಂಗ್ರೆಸ್  ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದು, ಈ ಸಂಬಂಧ ಕತೂಹಲಕಾರಿ ಬೆಳವಣಿಗೆ ಮೂಡಿಗೆರೆ ಪಪಂ ಸಾಕ್ಷಿಯಾಗಲಿದೆ. 

ಇನ್ನು ಜಿಲ್ಲೆಯ ಮೂರು ಪುರಸಭೆಗಳ ಪೈಕಿ ಕಡೂರು ಪುರಸಭೆಗೆ ಮಾತ್ರ ಬುಧವಾರ ಚುನಾವಣೆ ನಡೆದಿದ್ದು, ಮತಣಿಕೆ ಬಳಿಕೆ ಯಾವುದೇ ಪಕ್ಷಕ್ಕೂ ಬಹುಮತ ಬಾರದಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ 7 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಹಾಗೂ 6 ಸ್ಥಾನಗಳನ್ನು ಪಡೆದ ಜೆಡಿಎಸ್ ನಡುವೆ ಮೈತ್ರಿ ಏರ್ಪಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದು ಸಾಧ್ಯವಾದಲ್ಲಿ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಪುರಸಭೆ ಆಡಳಿತ ಈ ಬಾರಿ ಮೈತ್ರಿ ಪಾಲಾಗಲಿದೆ.

ಕಳೆದ ಅವಧಿಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಬಿಜೆಪಿಯು ಶೃಂಗೇರಿ, ಕೊಪ್ಪ ಪಟ್ಟಣ ಪಂಚಾಯತ್‍ಗಳಲ್ಲಿ ಆಡಳಿತ ನಡೆಸಿತ್ತು. ಈ ಬಾರಿ ಈ ಎರಡು ಪಟ್ಟಣ ಪಂಚಾಯತ್‍ಗಳೊಂದಿಗೆ ಮೂಡಿಗೆರೆಯನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆಯಾದರೂ ಅಧ್ಯಕ್ಷೆ ಸ್ಥಾನದ ಮೀಸಲಾತಿ ವಿಚಾರ ಬಿಜೆಪಿ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ. ಕಳೆದ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್ ಹೊಂದಾಣಿಕೆ ಮೂಲಕ ಆಡಳಿತ ನಡೆಸಿದ್ದ ನರಸಿಂಹರಾಜಪುರ ಪಟ್ಟಣ ಪಂಚಾಯತ್‍ನ 11 ವಾರ್ಡ್‍ಗಳ ಪೈಕಿ 9ರಲ್ಲಿ ಗೆಲ್ಲುವ ಮೂಲಕ ಪಪಂ ಆಡಳಿತವನ್ನು ಈ ಬಾರಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇನ್ನು ಕಡೂರು ಪುರಸಭೆಯಲ್ಲಿ 13 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸಿತ್ತು. ಆದರೆ ಈ ಬಾರಿ ಕೇವಲ 7 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ 6 ಸ್ಥಾನಗಳನ್ನು ಪಡೆದಿರುವ ಜೆಡಿಎಸ್‍ನೊಂದಿಗೆ ಮೈತ್ರಿಗೆ ಮುಂದಾಗಿದೆ ಎನ್ನಲಾಗುತ್ತಿದೆ.. 

ಕಳೆದ ಅವಧಿಯಲ್ಲಿ ಈ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟಾರೆ 68 ಸ್ಥಾನಗಳ ಪೈಕಿ ಬಿಜೆಪಿ 30, ಕಾಂಗ್ರೆಸ್ 27, ಜೆಡಿಎಸ್ 8 ಹಾಗೂ 2 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲು ವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 3 ಸ್ಥಾನಗಳನ್ನು ಕಳೆದುಕೊಂಡು 27ಕ್ಕೆ ಇಳಿದಿದ್ದರೆ, ಕಾಂಗ್ರೆಸ್ ಕಳೆದ ಅವಧಿಯಂತೆಯೇ ಈ ಬಾರಿಯೂ 27 ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ ಹಿಂದಿನ ಅವಧಿಯಲ್ಲಿ ಗೆದ್ದಿದ್ದ 8ರ ಪೈಕಿ 1 ಸ್ಥಾನವನ್ನು ಕಳೆದುಕೊಂಡು ಈ ಬಾರಿ 7ಕ್ಕೆ ಇಳಿದಿದೆ. ಇನ್ನು ಪಕ್ಷೇತರರು ಕಳೆದ ಬಾರಿ2 ಸ್ಥಾನಗಳಿಸಿದ್ದು, ಈ ಬಾರಿ 6ರಲ್ಲಿ ಗೆಲುವು ಸಾಧಿಸಿದ್ದಾರೆ.

►ಮೂಡಿಗೆರೆ ಪಟ್ಟಣ ಪಂಚಾಯತ್‍ನ 11 ಸ್ಥಾನಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 4 ಹಾಗೂ 1 ಸ್ಥಾನದಲ್ಲಿ ಜೆಡಿಎಸ್ ಗೆಲುವು ಕಂಡಿದ್ದಾರೆ.

►ಕೊಪ್ಪ ಪಟ್ಟಣ ಪಂಚಾಯತ್‍ನ 11 ಸ್ಥಾನಗಳ ಪೈಕಿ ಬಿಜೆಪಿ 6, ಕಾಂಗ್ರೆಸ್ 4 ಹಾಗೂ 1 ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.

►ಶೃಂಗೇರಿ ಪಟ್ಟಣ ಪಂಚಾಯತ್‍ನ 11 ಸ್ಥಾನಗಳ ಪೈಕಿ ಬಿಜೆಪಿ 7, ಕಾಂಗ್ರೆಸ್ 3 ಹಾಗೂ 1 ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ.

►ನರಸಿಂಹರಾಜಪುರ ಪಟ್ಟಣ ಪಂಚಾಯತ್‍ನ 11 ಸ್ಥಾನಗಳ ಪೈಕಿ ಕಾಂಗ್ರೆಸ್ 9 ಹಾಗೂ 2 ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.

►ಕಡೂರು ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 7, ಜೆಡಿಎಸ್ 6, ಬಿಜೆಪಿ 6 ಹಾಗೂ 4 ಸ್ಥಾನಗಳಲ್ಲಿ ಪಕ್ಷೇತರರು ಗೆದ್ದಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News