ಅಲ್ಪಸಂಖ್ಯಾತರ ಘಟಕದ ನೂತನ ಜಿಲ್ಲಾಧ್ಯಕ್ಷ ಎ.ಕೆ.ಹ್ಯಾರಿಸ್ ಅಧಿಕಾರ ಸ್ವೀಕಾರ
ಮಡಿಕೇರಿ, ಮೇ 31 :ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಎ.ಕೆ.ಹ್ಯಾರಿಸ್ ಅವರು ಇಂದು ಅಧಿಕಾರ ಸ್ವೀಕರಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ನಾಯಕರಿಂದ ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ಹ್ಯಾರಿಸ್ ಅಧಿಕಾರ ಪಡೆದರು.
ನಂತರ ಮಾತನಾಡಿದ ಅವರು ಅಲ್ಪಸಂಖ್ಯಾತ ಘಟಕಗಳನ್ನು ಸಂಘಟಿಸುವ ಮೂಲಕ ಪಕ್ಷಕ್ಕೆ ಬಲ ತುಂಬುವುದಾಗಿ ತಿಳಿಸಿದರು. ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಅಲ್ಪಸಂಖ್ಯಾತ ಘಟಕದ ನಿರ್ಗಮಿತ ಅಧ್ಯಕ್ಷ ಹಾಗೂ ವಕ್ಫ್ ಮಂಡಳಿಯ ಅಧ್ಯಕ್ಷ ಕೆ.ಎ.ಯಾಕುಬ್ ಮಾತನಾಡಿ ಅಲ್ಪಸಂಖ್ಯಾತರಿಗಾಗಿ ಸರ್ಕಾರದ ಮೂಲಕ ಲಭ್ಯವಿರುವ ಯೋಜನೆಗಳ ಲಾಭವನ್ನು ತಮ್ಮ ಅಧಿಕಾರವಧಿಯಲ್ಲಿ ಅರ್ಹ ಫಲಾನುಭವಿಗಳಿಗೆ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.
ಮದರಸ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 11 ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ವ್ಯಯಿಸಲಾಗಿದೆ. ಶಾದಿಭ್ಯಾಗ್ಯ, ಮುಖ್ಯಮಂತ್ರಿಗಳ ನಿಧಿ ಹಾಗೂ ಇನ್ನಿತರ ಅನುದಾನಗಳು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿನಿಯೋಗವಾಗುವಂತೆ ನೋಡಿಕೊಂಡಿರುವುದಾಗಿ ಹೇಳಿದರು. ನೂತನ ಅಧ್ಯಕ್ಷ ಹ್ಯಾರಿಸ್ ಅವರು ಉತ್ತಮ ರೀತಿಯಲ್ಲಿ ಪಕ್ಷವನ್ನು ಸಂಘಟಿಸಲಿದ್ದಾರೆ ಎಂದು ಯಾಕುಬ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಉಪಾಧ್ಯಕ್ಷ ಹ್ಯಾರಿಸ್ ಎಡಪಾಲ, ಸಂಯೋಜಕ ಎಂ.ಎ ಉಸ್ಮಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್, ಸಂಯೋಜಕ ಮಹಮ್ಮದ್ ಶಫಿ, ಪ್ರಮುಖರಾದ ಶೌಕತ್ ಅಲಿ, ಬಷೀರ್, ನಾಪೋಕ್ಲು ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್, ಅಲ್ಪಸಂಖ್ಯಾತರ ಘಟಕದ ಮ್ಯಾಥ್ಯು, ಫ್ಯಾಟ್ರಿಕ್, ವಾಹಿದ್, ಕೆಪಿಸಿಸಿ ಕಾರ್ಯದರ್ಶಿ ನಾರಾಯಣ ಮತ್ತಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.
ನೂತನ ಅಧ್ಯಕ್ಷ ಎ.ಕೆ.ಹ್ಯಾರಿಸ್ ಹಾಗೂ ವಕ್ಫ್ ಅಧ್ಯಕ್ಷ ಕೆ.ಎ.ಯಾಕುಬ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.