×
Ad

ರೈತರ ಭೂಮಿ ಸ್ವಾಧೀನ ವಿಚಾರ: ಸತೀಶ್ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳ್ಕರ್ ವಾಕ್ಸಮರ

Update: 2019-06-01 18:14 IST

ಬೆಳಗಾವಿ, ಜೂ.1: ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಲಗಾ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತದ ಕ್ರಮಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲಾಡಳಿತದ ಪರವಾಗಿ ನಿಂತಿದ್ದರೆ, ಸ್ಥಳೀಯ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ. ಇದೇ ವಿಚಾರ ಈಗ ಉಭಯ ನಾಯಕರ ನಡುವೆ ಮತ್ತೊಂದು ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿದೆ.

ಅಭಿವೃದ್ಧಿಗೆ ನಾನು ಎಂದು ವಿರೋಧ ವ್ಯಕ್ತಪಡಿಸಿಲ್ಲ. ಆದರೆ ರೈತರು ಬೆಳೆ ಬೆಳೆಯುವಂತಹ ಫಲವತ್ತಾದ ಜಮೀನನ್ನು ಸ್ವಾಧೀನಪಡಿಸಿಕೊಂಡು, ಯೋಜನೆ ಅನುಷ್ಠಾನಕ್ಕೆ ತರುವುದು ಸರಿಯಲ್ಲ. ಈ ಬಗ್ಗೆ ಕಳೆದ 4 ವರ್ಷದಿಂದ ನಾನು ರೈತರ ಪರವಾಗಿ ಹೋರಾಡುತ್ತಿದ್ದೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ಕರುಣೆ ಇಲ್ಲದೆ, ಯವುದೋ ಕಾಣದ ಕೈಗಳ ಕೈವಾಡದಿಂದ ಜಿಲ್ಲಾಡಳಿತ ಈ ರೀತಿ ವರ್ತಿಸಿದೆ. ನಾನು ಇಲ್ಲಿಯ ಶಾಸಕಿಯಾಗಿ ಜನರಿಗೆ ಉತ್ತರ ಕೊಡುವುದು ಕಷ್ಟವಾಗಿದೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲಾಡಳಿತದ ಈ ವರ್ತನೆಯಿಂದ ಬೇಸತ್ತು ಯಾರಾದರೂ ರೈತರು ಆತ್ಮಹತ್ಯೆ ಮಾಡಿಕೊಂಡರೆ, ಸರಕಾರ, ಪಕ್ಷ ಹಾಗೂ ಜನಪ್ರತಿನಿಧಿಗಳಾದ ನಮಗೆ ಕಪ್ಪು ಚುಕ್ಕೆಯಾಗುತ್ತದೆ. ರೈತರು ಹಾಗೂ ಜಿಲ್ಲಾಡಳಿತದ ಜೊತೆ ಮಾತುಕತೆ ನಡೆಸಲು ನಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅವರು ಹೇಳಿದರು.

ಪ್ರಯೋಜನವಿಲ್ಲ: ನೀರು ಶುದ್ಧೀಕರಣ ಘಟಕದ ಯೋಜನೆಗೆ ಬೇಕಾದ ಭೂಮಿಯನ್ನು ಸರಕಾರ ವಶಕ್ಕೆ ಪಡೆದಿದ್ದು, ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ. ಆದುದರಿಂದ, ಈಗ ಯೋಜನೆಗೆ ವಿರೋಧ ವ್ಯಕ್ತಪಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೆ ನಷ್ಟ ಆಗದಂತೆ ಮಾತ್ರ ಕ್ರಮಕೈಗೊಳ್ಳಲು ಸಾಧ್ಯ. ಈ ಜವಾಬ್ದಾರಿಯನ್ನು ತಾನೇ ನಿರ್ವಹಿಸುತ್ತೇನೆ. ಈಗಾಗಲೇ ನಾನು ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಿದ್ದೇನೆ. 2 ವರ್ಷಗಳ ಹಿಂದೆಯೇ ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ಬೆಳಗಾವಿ ನಗರಕ್ಕೆ ಈ ಯೋಜನೆ ಅನಿವಾರ್ಯ ಆಗಿದೆ ಎಂದರು.

ರೈತರಿಗೆ ನಷ್ಟ ಆಗದಂತೆ ಈ ಯೋಜನೆಯನ್ನು ಜಾರಿ ಮಾಡಿ, ವಿಶೇಷ ಪ್ರಕರಣದ ಅಡಿಯಲ್ಲಿ ರೈತರಿಗೆ 30 ಲಕ್ಷ ರೂ. ಕೊಡಿಸುವ ಬಗ್ಗೆ ಪ್ರಸ್ತಾವನೆ ಇದೆ. ಈಗಾಗಲೇ ಸರಕಾರದ ಹಣ ಬಿಡುಗಡೆಯಾಗಿ ಮತ್ತೆ ವಾಪಸ್ ಹೋಗಿದ್ದು, 2ನೇ ಬಾರಿಗೆ ಹಣ ವಾಪಸ್ ಹೋದರೆ ಮತ್ತೆ ರೈತರಿಗೆ ಪರಿಹಾರ ನೀಡುವುದು ಕಷ್ಟವಾಗುತ್ತದೆ. ಇದನ್ನು ಸ್ಥಳೀಯ ಶಾಸಕರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳು ಬದಲಾವಣೆಯಾದರೆ ರೈತರಿಗೆ ನ್ಯಾಯ ಕೊಡಿಸುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯಾವ ಜಿಲ್ಲಾಧಿಕಾರಿ ಬಂದರೂ ಈಗ ಏನು ಮಾಡಲು ಆಗುವುದಿಲ್ಲ. ಈ ಹಿಂದೆ ಮಾನವೀಯ ದೃಷ್ಟಿಯಿಂದ ಜಿಲ್ಲಾಧಿಕಾರಿ ಕಾಲಾವಕಾಶ ಕೊಟ್ಟಿದ್ದರು. ಈಗ ಯಾರೇ ಜಿಲ್ಲಾಧಿಕಾರಿ ಬಂದರೂ ಯೋಜನೆಗೆ ಜಮೀನು ಕೊಡಿಸುವುದು ಅವರ ಜವಾಬ್ದಾರಿ. ಈ ಸಂಬಂಧ ನ್ಯಾಯಾಲಯದ ನಿರ್ದೇಶನವಿದೆ ಎಂದರು.

ರೈತರಿಗೆ ಸುಳ್ಳು ಭರವಸೆ ನೀಡಲು ಸಾಧ್ಯವಿಲ್ಲ. ಇದನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಅನ್ಯಾಯ, ತೊಂದರೆ ಆದರೆ ಸಹಿಸಿಕೊಳ್ಳಬೇಕು. ಶಾಸಕರು ಸರಕಾರದ ಒಂದು ಭಾಗ, ರೈತರಿಗೆ ತಿಳಿ ಹೇಳುವುದು ಅವರ ಕರ್ತವ್ಯ. ಯೋಜನೆಯ ಬಗ್ಗೆ ಇಬ್ಬರ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News