×
Ad

ಹಾಲು ಉತ್ಪಾದನೆ ಹೆಚ್ಚಳಕ್ಕೆ ಪ್ರೋತ್ಸಾಹ: ಬಸವರಾಜ ಅರಬಗೊಂಡ

Update: 2019-06-01 20:21 IST

ಧಾರವಾಡ, ಜೂ.1: ವಿಶೇಷ ಪೋಷಕಾಂಶಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಆಹಾರವಾಗಿರುವ ಹಾಲು, ಇಂದು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು ಧಾರವಾಡ ಹಾಲು ಒಕ್ಕೂಟವು ರೈತರಿಗೆ ಮತ್ತು ಹಾಲು ಉತ್ಪಾದಕರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದ್ದಾರೆ. 

ಶನಿವಾರ ನಗರದ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ವಿಶ್ವಹಾಲು ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವ ಹಾಲು ದಿನಾಚರಣೆಯು 2001 ರಿಂದ ಆಚರಣೆಗೆ ಬಂದಿದ್ದು, ಹಾಲಿನಲ್ಲಿರುವ ಎಲ್ಲಾ ಸೂಕ್ಷ್ಮ ಪೋಷಕಾಂಶಗಳ ಮಾಹಿತಿ ಪ್ರಚುರಪಡಿಸಲು ವಿಶ್ವ ಹಾಲು ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಅಪೌಷ್ಟಿಕತೆ ಹೋಗಲಾಡಿಸಲು ಆರಂಭದಲ್ಲಿ ಅಂಗನವಾಡಿ ಮಕ್ಕಳಿಗೆ ಮಾತ್ರ ಹಾಲನ್ನು ವಿತರಿಸಲಾಗುತ್ತಿತ್ತು. ಆದರೆ, ಭಾರತದಲ್ಲಿ ಅದರಲ್ಲೂ ನಮ್ಮ ರಾಜ್ಯದ ಮಕ್ಕಳಲ್ಲಿರುವ ವಿಶೇಷ ಪೋಷಕಾಂಶಗಳ ಕೊರತೆಯನ್ನು ಪರಿಗಣಿಸಿ ರಾಜ್ಯ ಸರಕಾರವು ‘ಕ್ಷೀರಭಾಗ್ಯ’ ಕಾರ್ಯಕ್ರಮ ಜಾರಿಗೆ ತಂದಿತು ಎಂದು ಅವರು ಹೇಳಿದರು. ಈ ಮೂಲಕ ಎಲ್ಲ ಮಕ್ಕಳಿಗೂ ಹಾಲು ವಿತರಿಸಲು ಕ್ರಮ ಕೈಗೊಂಡಿದೆ. ಹಾಲು ಒಂದು ಪೂರ್ಣ ಪ್ರಮಾಣದ ಆಹಾರ. ಹಾಲಿನಲ್ಲಿರುವಂತಹ ಸೂಕ್ಷ್ಮ ಪೋಷಕಾಂಶಗಳನ್ನು ಸೇವಿಸುವುದರಿಂದ ಮಕ್ಕಳು ಆರೋಗ್ಯವಾಗಿ ಮತ್ತು ಸದೃಢವಾಗಿ ಬೆಳೆಯುತ್ತಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹಾಲು ಒಕ್ಕೂಟದ ನಿರ್ದೇಶಕರಾದ ಎನ್.ಎಸ್.ಅಸೂಟಿ, ಶಂಕರ ಮುಗದ, ಸುರೇಶ್, ಗೀತಾ ಸುರೇಶ್ ಮರಿಲಿಂಗಣ್ಣವರ ಮಾತನಾಡಿದರು. ಡಾ.ಸುಷ್ಮಾ ರಾಮನಗೌಡರ ‘ಹಾಲಿನ ಮಹತ್ವ ಮತ್ತು ಚಿಕ್ಕಮಕ್ಕಳಿಗೆ ಹಾಲಿನ ಅವಶ್ಯಕತೆ’ ಕುರಿತು ಹಾಗೂ ಡಾ.ಪ್ರವೀಣ್‌ಕುಮಾರ್ ಪ್ರಭು ಅವರು ‘ದಂತ ಆರೋಗ್ಯ ಸಂಬಂಧಿತ ಹಾಲಿನ ಮಹತ್ವ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ವಿಶ್ವ ಹಾಲು ದಿನಾಚರಣೆ ನಿಮಿತ್ತ ನಂದಿನಿ ಬಾದಾಮಿ ಹಾಲು, ಶಾಲಾ ಪಠ್ಯ ಪರಿಕರಗಳನ್ನು ವಿತರಿಸಲಾಯಿತು. ರೈತರ ಜೀವನಾಡಿ ಮತ್ತು ಗ್ರಾಹಕರ ನೆಚ್ಚಿನ ನಂದಿನಿ ವಿಷಯ ಕುರಿತು ಸಿಎಸ್‌ಐ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮೂಕಾಭಿನಯದ ಮೂಲಕ ಕಿರುನಾಟಕ ಪ್ರಸ್ತುತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News